ಧಾರವಾಡ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ಮಹದಾಯಿ ವಿವಾದ ಇತ್ಯರ್ಥ ವಿಚಾರಕ್ಕೆ ಸಂಬಂಧಿಸಿದಂತೆ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿಕ್ರಿಯಿಸಿದ್ದು, ಇದು ಮೂರು ರಾಜ್ಯಗಳ ಅಂತರ್‌ರಾಜ್ಯ ಸಮಸ್ಯೆ. ಹೀಗಾಗಿ ಕಾನೂನಾತ್ಮಕವಾಗಿ ಆ ಪ್ರಕ್ರಿಯೆ ಮುಂದುವರೆದಿದೆ. ಈಗಾಗಲೇ 1,677 ಕೋಟಿ ರೂ ಹಣವನ್ನು ಮಹದಾಯಿಗಾಗಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದರು.
ಯೋಜನೆಯ ವಿಸ್ತೃತ ವರದಿ (ಡಿಪಿಆರ್) ಮಾಡಲು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ)ದ ಅನುಮತಿ ಕೇಳುವ ಪ್ರಯತ್ನದಲ್ಲಿದ್ದೇವೆ. ಮಹದಾಯಿ ಹೋರಾಟದಿಂದ ನಾವೆಲ್ಲ ಶಾಸಕರಾದವರು. ಈಗಿನ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿ.ಸಿ. ಪಾಟೀಲ್ ಮತ್ತು ನಾನು ಮಹದಾಯಿ ಹೋರಾಟದಿಂದಲೇ ಬೆಳೆದವರು. ಆ ಜವಾಬ್ದಾರಿ ಅರಿತು ಕಾನೂನಾತ್ಮಕವಾಗಿರೋ ವಿಚಾರ ಬಗೆಹರಿಸಿದ್ದೇವೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಈಗ ಮಹದಾಯಿ ಬಗ್ಗೆ ಯಾವುದೇ ಚರ್ಚೆ ಬೇಡ. ಇಂತಹ ಚರ್ಚೆಗಳಿಂದ ಪುನಃ ಗೊಂದಲ ಸೃಷ್ಟಿಯಾಗಿ ಕೆಲಸಕ್ಕೆ ಅಡೆತಡೆಯಾಗುವುದು ಬೇಡ. ಈ ಭಾಗಕ್ಕೆ ಮಹದಾಯಿ ವಿಷಯದಲ್ಲಿ ಒಳ್ಳೆಯದಾಗಲಿದೆ ಎಂದು ಭರವಸೆ ನೀಡಿದರು.