ಹುಬ್ಬಳ್ಳಿ: 1041.80 ಕೋಟಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಮಲಪ್ರಭಾ ನದಿಯಿಂದ 24x7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ನೀಲನಕ್ಷೆ ತಯಾರಾಗಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಜರುಗಿಸಿದ್ದು, ಯೋಜನೆಗೆ ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಜರುಗಿದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಎಸ್.ಟಿ.ಯು.ಪಿ ಕನ್ಸಲ್ಟೆಂಟ್ ನವರು ಯೋಜನೆಯ ಪ್ರಾಥಮಿಕ ಸಿದ್ದತಾ ವರದಿಯನ್ನು ವಿಸ್ತೃತವಾಗಿ ಜನಪ್ರತಿನಿಧಿಗಳೆದುರು ಮಂಡಿಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವರಾದ ಪ್ರಲ್ಹಾದ್ ಜೋಶಿಯವರು ವೆಬಿನಾರ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಲಘಟಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದರು.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಒಪ್ಪಿಗೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯನ್ನು ಮಂಡಿಸಲಾಗುವುದು. ಅಲ್ಲಿ ಒಪ್ಪಿಗೆ ಪಡೆದ ನಂತರ ಯೋಜನೆಯ ಟೆಂಡರ್ ಕರೆಯಲಾಗುವುದು ಎಂದರು.
ಹುಬ್ಬಳ್ಳಿ- ಧಾರವಾಡ ಅವಳಿ ನಗರದ 24x7 ಕುಡಿಯುವ ನೀರಿನ ಯೋಜನೆ ಕುರಿತು ಎಲ್.ಎನ್.ಟಿ ಕಂಪನಿಯವರು ಅಧ್ಯಯನಕ್ಕಾಗಿ ಆರು ತಿಂಗಳ ಸಮಯವಕಾಶ ಕೋರಿದ್ದಾರೆ. ಅವರಿಗೆ ಮೂರು ತಿಂಗಳ ಸಮಯವಕಾಶ ನೀಡಲಾಗಿದೆ. ಬರುವ ಮಾರ್ಚ ನಂತರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುವ ಜಾಗದಲ್ಲಿ ಅಗತ್ಯ ಮುಂಜಾಗೃತ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿ ಎಂಡಿ ಗೆ ಸೂಚನೆ ನೀಡಿದ್ದೇನೆ. ಗ್ಲಾಸ್ ಹೌಸ್ ದುರ್ಘಟನೆಯಲ್ಲಿ ಹೆಣ್ಣು ಮಗು ಮೃತ ಪಟ್ಟಿರುವುದು ದುರದೃಷ್ಟಕರವಾಗಿದೆ. ಮೃತ ಮಗುವಿನ ಕುಟುಂಬದವರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.