ಧಾರವಾಡ: ಜಿಲ್ಲಾ ಕಾರಾಗೃಹದಲ್ಲಿ ಅಕ್ರಮವಾಗಿ ಗಾಂಜಾ ಹಾಗೂ ನಿಷೇಧಿತ ವಸ್ತುಗಳನ್ನು ಬಳಸುತ್ತಿದ್ದ ನಾಲ್ವರು ಕೈದಿಗಳಿಗೆ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಂಚಾಕ್ಷರಿ ಎಂ. ಅವರು ಶಿಕ್ಷೆ ವಿಧಿಸಿದ್ದಾರೆ.
2010 ರ ಮೇ. 23 ರಂದು ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾ ಕಾರಾಗೃಹದ ಶೋಧನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳಾದ ಬಚ್ಚಾಖಾನ ಉರುಫ್ ಯೂಸುಫ್ ಖಾದ್ರಿ, ಶಂಕರಗೌಡ ಅಲಿಯಾಸ್ ಬೆತ್ತನಗೆರೆ ಶಂಕರ ತಂದೆ ಗೋಪಾಲಗೌಡ, ಮುನಿರಾಜು ಹನುಮಂತರಾಯಪ್ಪ, ಜಾವೇದ ಶಂಶಾದ್ ಅಲಿ ಡಾಲಾಯತ್ ಎಂಬ ನಾಲ್ವರು ತಮ್ಮ ಕೊಠಡಿಗಳ ತಪಾಸಣೆಗೆ ಅಡ್ಡಿಪಡಿಸಿದ್ದರು.
ಆರೋಪಿಗಳು ಅಕ್ರಮವಾಗಿ ಗಾಂಜಾ ಹಾಗೂ ನಿಷೇಧಿತ ವಸ್ತುಗಳನ್ನು ಹೊಂದಿದ್ದ ಆರೋಪ ಸಾಬೀತಾದ ಕಾರಣ ಇವರಲ್ಲಿ ಒಂದನೇ ಆರೋಪಿಗೆ ಎರಡು ವರ್ಷ, ಎರಡನೇ ಆರೋಪಿಗೆ ಒಂದು ವರ್ಷ ಹಾಗೂ ಮೂರು ಮತ್ತು ನಾಲ್ಕನೇ ಆರೋಪಿಗಳಿಗೆ ಆರು ತಿಂಗಳ ಶಿಕ್ಷೆಯನ್ನು ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಜಿ.ಹೊಸಮನಿ ವಾದ ಮಂಡಿಸಿದ್ದರು. ಎಂ.ಆರ್.ಚೆನ್ನಣ್ಣವರ ತನಿಖೆ ಕೈಗೊಂಡಿದ್ದರು.