ಹುಬ್ಬಳ್ಳಿ: ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಮುಂದಾಗಿದ್ದ ಜಿಲ್ಲಾಧಿಕಾರಿಯೇ ಶಾಕ್ ಆಗಿರುವ ಘಟನೆ ನಗರದ ಮಾಲ್ವೊಂದರಲ್ಲಿ ನಡೆದಿದೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಖುದ್ದಾಗಿ ಫೀಲ್ಡಿಗಿಳಿದು ಮಾಸ್ಕ್ ಧರಿಸಿದವರಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಿದ್ದಾರೆ. ನಗರದ ಹುಬ್ಬಳ್ಳಿಯ ಮಾಲ್ ಒಂದಕ್ಕೆ ಭೇಟಿ ನೀಡಿದರು. ಈ ವೇಳೆ, ಅಧಿಕಾರಿಗಳು ಮಾಸ್ಕ್ ಧರಿಸದವರನ್ನು ಹಿಡಿದು ದಂಡ ವಿಧಿಸುತ್ತಿದ್ದರು. ಆಗ ಮಹಿಳೆಯೊಬ್ಬರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಆಕೆಯ ಪತಿ ಅಧಿಕಾರಿಗಳೊಂದಿಗೆ ಜಗಳಕ್ಕಿಳಿದರು.
ನಾನು ದಂಡ ಕಟ್ಟೋದಿಲ್ಲ.. ನಾನು ಯಾರು ಗೊತ್ತಾ..? ಎಂದು ಡಿಸಿ ಎದುರಿಗೆ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದರು. ದಂಡ ಕಟ್ಟವುದಿಲ್ಲ, ನನ್ನ ಹೆಂಡತಿಯನ್ನು ತಡೆದಿದ್ದು ಯಾಕೆ ಎಂದು ವ್ಯಕ್ತಿ ಪಟ್ಟು ಹಿಡಿದಿದ್ದು, ಮಹಿಳೆಯರನ್ನು ಹೀಗೆ ತಡೆಯುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೊನೆಗೆ ಅಧಿಕಾರಿಗಳು ಮಾಸ್ಕ್ ಧರಿಸದ ದಂಪತಿಗೆ 250 ರೂಪಾಯಿ ದಂಡ ಹಾಕಿದರು. ಹಣ ಕಟ್ಟಲು ನನ್ನ ಬಳಿ ಹಣ ಇಲ್ಲ. ಡಿಸಿ ಇದ್ದರೆ ನಾ ಏನ್ ಮಾಡಲಿ ? ನಾ ದಂಡ ಕಟ್ಟುವುದಿಲ್ಲ. ನನ್ ಹೆಂಡತಿಗೆ ಹ್ಯಾಂಗ್ ನಿಲ್ಲಿಸಿದ್ರಿ.? ಮಾಸ್ಕ್ ಬಿಟ್ಟು ಬಂದೀವಿ.. ಎಂದು ತಗಾದೆ ತೆಗೆದ ವ್ಯಕ್ತಿಯ ಬಳಿಯಿಂದ ಕೊನೆಗೂ ಅಧಿಕಾರಿಗಳು 250 ರೂ ದಂಡ ವಸೂಲಿ ಮಾಡಿದರು.