ಹುಬ್ಬಳ್ಳಿ : ಕೇಂದ್ರ ಸರ್ಕಾರದ ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಬಂದಿರುವುದು ನಿಜವಾಗಿಯೂ ಸಂತೋಷವಾಗಿದೆ. ಹೆದ್ದಾರಿಗಳ ಮೇಲೆ ಬಿಜೆಪಿಯವರಷ್ಟೇ ಓಡಾಡುವುದಿಲ್ಲ, ಎಲ್ಲರೂ ಓಡಾಡುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂತಹದ್ದೊಂದು ಯೋಜನೆಗೆ ಶಂಕುಸ್ಥಾಪನೆಗೆ ಆಗಮಿಸಿರುವುದು ವಿಶೇಷವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗಬ್ಬೂರಿನ ಟ್ರಕ್ ಟರ್ಮಿನಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ರಾಜಕೀಯ ಮಾಡಬಾರದು. ರಸ್ತೆಯ ಮೇಲೆ ಬಿಜೆಪಿಗರು ಮಾತ್ರ ಕಾಂಗ್ರೆಸ್ನವರು ಮಾತ್ರ ಓಡಾಡುವುದಿಲ್ಲ. ಇಲ್ಲಿ ರಾಜಕೀಯಕ್ಕಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ ಎಂದರು.
ಇದನ್ನೂ ಓದಿ : 2024ರ ವೇಳೆಗೆ ಅಮೆರಿಕ ಮಾದರಿಯಲ್ಲಿ ದೇಶದ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ : ಸಚಿವ ಗಡ್ಕರಿ ಭರವಸೆ
ನಾನು ಮೊದಲಿನಿಂದಲೂ ನೋಡಿದ್ದೇನೆ, ಸಚಿವ ನಿತಿನ್ ಗಡ್ಕರಿ ಅಭಿವೃದ್ಧಿ ಪರ ಹೋರಾಟ ಮಾಡುವ ರಾಜಕಾರಣಿ. ಅವರ ಕಾರ್ಯಪ್ರವೃತ್ತಿ ನನಗೆ ಇಷ್ಟಾವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ವೈಯಕ್ತಿಕವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಾವಿನ ದಾರಿಗೆ ಮುಕ್ತಿ, ಟೋಲ್ ಫ್ರೀ ಮೂಲಕ ವಿಶೇಷ ಸೇವೆ : ಜೋಶಿ ವಿಶ್ವಾಸ- ಸಾವಿನ ಹೆದ್ದಾರಿಗೆ ಮುಕ್ತಿ ಸಿಕ್ಕಂತಾಗಿದೆ. ಏಳೆಂಟು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯ ಗಬ್ಬೂರಿನಿಂದ ಧಾರವಾಡದ ನರೇಂದ್ರವರೆಗೆ ಷಟ್ಪಥ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ರಾಷ್ಟ್ರೀಯ ಹೆದ್ದಾರಿ ಶಂಕುಸ್ಥಾಪನೆ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ಅಪಘಾತಗಳಿಂದ ಸಾವಿನ ಹೆದ್ದಾರಿ ಎಂದು ಕರೆಸಿಕೊಳ್ಳುವುದನ್ನು ಕೇಳಿ ನಮಗೂ ಸಾಕಷ್ಟು ಬೇಸರವಾಗಿತ್ತು. ಈ ನಿಟ್ಟಿನಲ್ಲಿ ಸುಮಾರು ಏಳರಿಂದ ಎಂಟು ಕೋಟಿ ವೆಚ್ಚದಲ್ಲಿ ಷಟ್ಪಥ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ.
ಅಲ್ಲದೇ ಜನರಿಗೆ ಖುಷಿ ವಿಷಯ ಅಂದರೇ ಗಬ್ಬೂರಿನಿಂದ ಧಾರವಾಡದ ನರೇಂದ್ರದವರೆಗೆ ಸರ್ವೀಸ್ ರೋಡ್ ಜೊತೆಗೆ ಸರ್ವೀಸ್ ರೋಡ್‌ಗಳಲ್ಲಿ ಯಾವುದೇ ಟೋಲ್‌ಗಳನ್ನು ಅನುಷ್ಠಾನಗೊಳಿಸದೇ ಟೋಲ್ ಫ್ರೀ ಸೇವೆಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಯಾವ ದೇಶದಲ್ಲಿ ಮೂಲಸೌಕರ್ಯಗಳು ಸರಿಯಾಗಿ ಇರುತ್ತದೆಯೋ ಆ ದೇಶ ಶ್ರೀಮಂತ ದೇಶ ಎಂಬುವಂತ ಧ್ಯೇಯ ವಾಕ್ಯದಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆ ಜಾರಿಗೊಳಿಸುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು.