ಹುಬ್ಬಳ್ಳಿ: ಮಾಜಿ ಶಾಸಕ, ಜಾತ್ಯತೀತ ಜನತಾದಳ ಯುವ ಘಟಕದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಪ್ರಭಾವಿ ಮುಖಂಡ ಮಧು ಬಂಗಾರಪ್ಪ ಹಾಗು ಅವರ ನೇತೃತ್ವದಲ್ಲಿ ಜಾತ್ಯತೀತ ಜನತಾದಳ ತೊರೆದು ರಾಜ್ಯಾದ್ಯಂತ ತಮ್ಮ ಅಪಾರ ಬೆಂಬಲಿಗರೊಂದಿಗೆ ಜುಲೈ 30 ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ಗಾರ್ಡನ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲಾ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳು 'ಕೈ' ವಶ:
ಹುಬ್ಬಳ್ಳಿ-ಧಾರಾವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದಲ್ಲೂ ಜಾತ್ಯತೀತ ಜನತಾದಳ ತೊರೆದು ಹು-ಧಾ ಸೆಂಟ್ರಲ್ ಜೆಡಿಎಸ್ ಅಧ್ಯಕ್ಷ ಕಿರಣ್ ಹಿರೇಮಠ, ಭೈರಿದೇವರಕೊಪ್ಪ ಗ್ರಾಮದ ಹಿರಿಯರು ಹಾಗೂ ಪ್ರಭಾವಿ ಜೆಡಿಎಸ್ ಮುಖಂಡ ಬಸವರಾಜ್ ಮಾಯಕರ್ ಇವರ ನೇತೃತ್ವದಲ್ಲಿ ನೂರಾರು ಜಾತ್ಯತೀತ ಜನತಾದಳದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಹಾಗೂ ನಾಯಕತ್ವವನ್ನು ಒಪ್ಪಿಕೊಂಡು, ಅದೇ ವೇದಿಕೆಯಲ್ಲಿ 'ಕೈ' ಹಿಡಿಯಲಿದ್ದಾರೆ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಮಾಹಿತಿ ನೀಡಿದ್ದಾರೆ.