ಹುಬ್ಬಳ್ಳಿ : ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸಚಿವ ಜಗದೀಶ್ ಶೆಟ್ಟರ್ ವಿದ್ಯಾನಗರದ ಗಣಪತಿ ದೇವಸ್ಥಾನ ಬಳಿ ಗುಲಾಬಿ ಹೂವು ನೀಡಿ, ಅಗತ್ಯ ಸಾಮಾಗ್ರಿಗಳ ಕಿಟ್ ವಿತರಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾಳೆಯಿಂದ ಹುಬ್ಬಳ್ಳಿಯಲ್ಲಿ ಲಾಕ್‌ಡೌನ್ ಸಡಿಲಿಕೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದರು.
ಹುಬ್ಬಳ್ಳಿ ನಗರ ಹೊರತುಪಡಿಸಿ ಧಾರವಾಡ ಜಿಲ್ಲೆಯಾದ್ಯಂತ ಈಗಾಗಲೇ ಆರ್ಥಿಕ ಚಟುವಟಿಕೆ ಆರಂಭವಾಗಿವೆ. ಹುಬ್ಬಳ್ಳಿಯಲ್ಲಿ ಸೀಲ್‌ಡೌನ್ ಪ್ರದೇಶ ಬಿಟ್ಟು ಉಳಿದೆಡೆ ವಾಣಿಜ್ಯ,ವಹಿವಾಟು ನಡೆಸಲು ಅನುಮತಿ ನೀಡಿದ್ದೇವೆ. ನಿನ್ನೆ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಲಾಕ್‌ಡೌನ್ ಸಡಿಲಿಕೆ ಅವಕಾಶವನ್ನು ಜನತೆ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಅನಗತ್ಯ ತಿರುಗಾಟಕ್ಕೆ ಸ್ವಯಂ ನಿರ್ಬಂಧಕ್ಕೆ ಸಲಹೆ ನೀಡಿದರು. ಮಾಸ್ಕ್ ಧರಿಸದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ಎಂದು ಎಚ್ಚರಿಸಿದರು. ಶಾಪಿಂಗ್ ಮಾಲ್, ಬಾರ್, ರೆಸ್ಟೊರೆಂಟ್, ಜಿಮ್, ಧಾರ್ಮಿಕ ಚಟುವಟಿಕೆ, ಸಭೆ,ಸಮಾರಂಭ ನಿರ್ಬಂಧಗಳು ಮುಂದುವರಿಯಲಿದೆ ಎಂದು ಸಚಿವ ಶೆಟ್ಟರ್ ಹೇಳಿದರು.