ಹುಬ್ಬಳ್ಳಿ: ಏಪ್ರಿಲ್ ಹಾಗೂ ಮೇ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಹಣ್ಣುಗಳ ರಾಜ ಮಾವಿನ ಹಣ್ಣಿನ ಮಾರಾಟ ಜೋರಾಗಿ ನಡೆಯುತಿತ್ತು. ಆದ್ರೆ ಈ ಬಾರಿ ಲಾಕ್ಡೌನ್ ಘೋಷಣೆ ಮಾಡಿದ ಪರಿಣಾಮ ಮಾವಿನ ಹಣ್ಣಿನ ಮಾರಾಟ ತೀವ್ರ ಕುಸಿತ ಕಂಡಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾವಿನ ಹಣ್ಣಿನ ಸೀಜನ್ ಪ್ರಾರಂಭವಾಗುತಿದ್ದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಪುಸ್, ಕಲ್ಮಿ, ಮಲಗೋಬಾ ಸೇರಿದಂತೆ ಹಲವಾರು ತಳಿಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಈ ಬಾರಿ ಲಾಕ್ಡೌನ್ ಹಿನ್ನೆಲೆ ಮಾರುಕಟ್ಟೆಗೆ ಬರುವ ಹಣ್ಣಿನ ಪ್ರಮಾಣ ಕಡಿಮೆಯಾಗಿದ್ದು, ಸಾರ್ವಜನಿಕರ ಖರೀದಿಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ.
ಈದ್ಗಾ ಮೈದಾನ, ಜನತಾ ಬಜಾರ್, ದುರ್ಗದ ಬೈಲ್ ಸೇರಿದಂತೆ ವಾಣಿಜ್ಯನಗರಿಯ ಆಯಕಟ್ಟಿನ ಪ್ರದೇಶಗಳಲ್ಲಿ ಪ್ರವೇಶಿಸುತ್ತಿದ್ದಂತೆ ಮಾವಿನ ಹಣ್ಣಿನ ವಾಸನೆ ಹಣ್ಣು ಪ್ರಿಯರನ್ನು ಆಕರ್ಷಿಸುತ್ತಿತ್ತು. ಈ ಬಾರಿ ಲಾಕ್ಡೌನ್ ಮಾವಿನ ಮಾರಾಟಕ್ಕೆ ಹೊಡೆತ ನೀಡಿದೆ. ಅಲ್ಲದೇ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.