ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿಯ ಮಹಿಳೆಯೋರ್ವರು ಪುರುಷರಿಗಿಂತ ತಾನೇನು ಕಮ್ಮಿ ಇಲ್ಲ ಎನ್ನುವಂತೆ ಆಟೋ ಚಾಲನೆಯೊಂದಿಗೆ ದುಡಿಮೆ ಮಾಡುವ ಮೂಲಕ ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಹೌದು, ಈಶ್ವರ ನಗರದ ಹೂಗಾರ ಪ್ಲಾಟ್ನ ನಿವಾಸಿ ಮಂಜುಳಾ ಹಿರೇಮಠ ಕಳೆದ ಐದಾರು ವರ್ಷಗಳಿಂದ ವಾಣಿಜ್ಯ ನಗರಿಯಲ್ಲಿ ಆಟೋ ಓಡಿಸುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಇದಕ್ಕೆ ಕಾರಣ ಕಡು ಬಡತನ ಹಾಗೂ ಕುಟುಂಬ ನಿರ್ವಹಣೆಯ ಜವಾಬ್ದಾರಿ ಅವರ ಹೆಗಲಿಗೆ ಬಿದ್ದಿರುವುದು.
ತಮ್ಮ ಪತಿಯ ಅನಾರೋಗ್ಯದ ಕಾರಣದಿಂದ ಮಂಜುಳಾ ಅವರಿಗೆ ಸಂಕಷ್ಟದ ದಿನಗಳು ಎದುರಾಗಿದ್ದವು. ಆರ್ಥಿಕ ಹೊರೆ ಅವರನ್ನು ಕಾಡಲಾರಂಭಿಸಿತು. ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇತ್ತು. ಈ ಎಲ್ಲಾ ಸಂಕಷ್ಟಗಳಿಗೆ ಎದೆಗುಂದದೇ ಮಂಜುಳಾ 2017ರಿಂದ ಆಟೋ ಓಡಿಸಿಕೊಂಡು ತಮ್ಮ ಜೀವನ ಬಂಡಿಯನ್ನು ದೂಡುತ್ತಿದ್ದಾರೆ.
ಮಂಜುಳಾ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳ ಸಹಾಯದಿಂದ ಆಟೋ ಓಡಿಸುವುದನ್ನು ಚಿಕ್ಕ ವಯಸ್ಸಿನಲ್ಲೇ ಕಲಿತಿದ್ದರು. ಮದುವೆ ನಂತರ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದರು. ಪತಿ ಸಿದ್ದಲಿಂಗಯ್ಯ ಕೂಡಾ ಆಟೋ ಚಾಲನೆ ಮಾಡುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಸಿದ್ದಲಿಂಗಯ್ಯ ಅವರಿಗೆ ಅಪಘಾತವಾಗಿ ಕಾಲು ಮುರಿದುಕೊಂಡಿದ್ದರು. ಹೀಗಾಗಿ ಮಂಜುಳಾ ಹಿರೇಮಠ ತಮ್ಮ ಮಗಳ ಪೋಷಣೆ ಮತ್ತು ಜೀವನ ನಿರ್ವಹಣೆಗೆ ಆಟೋ ಚಾಲನೆ ಆರಂಭಿಸಿದರು.
ಇದನ್ನೂ ಓದಿ: ವಿನ್ಯಾಸ ಸಂಬಂಧಿ ಕಲಿಕೆ: ಬ್ರಿಟನ್ ವಿವಿ-ಕೌಶಲ್ಯಾಭಿವೃದ್ಧಿ ನಿಗಮ ಒಡಂಬಡಿಕೆ
ಈ ಕುರಿತು ಮಂಜುಳಾ ಅವರನ್ನು ಕೇಳಿದ್ರೆ ಮಹಿಳೆಯರು ಮನೆಯಿಂದ ಹೊರಬಂದು ಕೆಲಸ ಮಾಡಬೇಕು. ತಮ್ಮ ಕುಟುಂಬಕ್ಕೆ ಆಸರೆಯಾಗಬೇಕು. ಸಾಕಷ್ಟು ಕೆಲಸಗಳಿವೆ. ತಮ್ಮ ಕೈಲಾದುದನ್ನು ಮಾಡಿ. ಈ ಆಟೋ ದುಡಿಮೆಯಲ್ಲೂ ಸಾಕಷ್ಟು ಸಮಸ್ಯೆ, ಸವಾಲುಗಳಿವೆ. ಪ್ರತಿದಿನ ಹಲವಾರು ಮಂದಿ ಎದುರಾಗುತ್ತಾರೆ, ಜೊತೆಗೆ ಸ್ಪರ್ಧಿಗಳು ಇರುತ್ತಾರೆ. ಎಲ್ಲರನ್ನೂ ಎದುರಿಸಿ ಈ ಕೆಲಸ ಮಾಡಬೇಕು. ಒಟ್ಟಾರೆ ಈ ದುಡಿಮೆಯಿಂದ ನೆಮ್ಮದಿ ಇದ್ದು, ನನ್ನ ಕುಟುಂಬದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೇನೆ ಎಂದು ಮಂಜುಳಾ ತಿಳಿಸಿದರು.