ಹುಬ್ಬಳ್ಳಿ : ಕೊರೊನಾ ಆತಂಕದಿಂದ ಖಾಲಿ ಖಾಲಿಯಾಗಿ ಕಾಣುತ್ತಿದ್ದ ನಗರದ ಮುಖ್ಯ ರಸ್ತೆಗಳು ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದು ತುಂಬಿವೆ. ಎಲ್ಲೆಲ್ಲೂ ಸಡಗರದ ಖರೀದಿ ಜೋರಾಗಿದ್ದು ಹಬ್ಬದ ಸಂಭ್ರಮದಲ್ಲಿ ಜನರು ಕೊರೊನಾ ಆತಂಕವನ್ನೇ ಮರೆತಿದ್ದಾರೆ ಎನ್ನುವಂತಿದೆ.

ನಗರದ ಹಲವು ಮಾರುಕಟ್ಟೆಗಳು ಇಂದು ಬೆಳ್ಳಂಬೆಳಿಗ್ಗೆಯೇ ಜನರಿಂದ ಭರ್ತಿಯಾಗಿದ್ದು ಕಂಡು ಬಂದವು. ಸಾಮಾಜಿಕ ಅಂತರ ಮರೆತ ಸಾರ್ವಜನಿಕರು ವಸ್ತುಗಳ ಖರೀದಿಗಾಗಿ ಮುಗಿ ಬಿದ್ದಿದ್ದರು. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಹೆಸರಿಗೆ ಮಾತ್ರ ಎಂಬಂತೆ ಕೆಲವೆಡೆ ಮಾತ್ರ ಕಂಡು ಬಂದಿತು.
ಜನತಾ ಬಜಾರ್, ದುರ್ಗದ ಬೈಲ್, ಚನ್ನಮ್ಮ ಸರ್ಕಲ್ ಸೇರಿದಂತೆ ಇತರೆ ಮಾರುಕಟ್ಟೆ ಪ್ರದೇಶದಲ್ಲಿ ಜನರ ಅಜಾಗೃತೆ ಹೆಚ್ಚಾಗಿತ್ತು. ಹೂ, ಹಣ್ಣು, ಬಾಳೆ ಕಂಬ, ತೆಂಗಿನ ಕಾಯಿ ಸೇರಿದಂತೆ ಇತ್ಯಾದಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು.
ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತವು ಅನುಮತಿಯ ಜೊತೆಗೆ ಕೆಲವೊಂದು ನಿಬಂಧನೆಗಳನ್ನು ನೀಡಿದ್ದರಿಂದ ಅಗತ್ಯ ವಸ್ತುಗಳ ಖರೀದಿಗೆ ಜನರ ಹಿಂದೇಟು ಹಾಕುತ್ತಿದ್ದ ದೃಶ್ಯವೂ ಕಂಡು ಬಂತು.
ಕೊರೊನಾ ಬಂದು ನಮ್ಮ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ. ಜನ ಅಂದುಕೊಂಡಷ್ಟು ಖರೀದಿ ಮಾಡುತ್ತಿಲ್ಲ. ಇದರಿಂದ ಸಾವಿರಾರು ರೂ. ಬಂಡವಾಳ ಹಾಕಿ ಮಾಲು ತಂದರೂ ಲಾಭ ಮಾತ್ರ ಕೈಗೆ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ವ್ಯಾಪಾರಸ್ಥರು.