ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ರೌದ್ರ ನರ್ತನ ಮುಂದುವರೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿಯೂ ಕೂಡ ಜನರು ಚಿಕಿತ್ಸೆಗಾಗಿ ಹರಸಾಹಸ ಪಡುವಂತಾಗಿದೆ. ಸಚಿವರು, ಶಾಸಕರು, ಸೆಲೆಬ್ರೆಟಿಗಳು ಕೂಡ ತಮ್ಮವರಿಗಾಗಿ ಬೆಡ್ ಹೊಂದಿಸಲಾಗದೆ ಕಷ್ಟ ಪಡುವಂತಾಗಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ತಾಯಿ 3 ದಿನಗಳ ಹಿಂದೆಯಷ್ಟೇ ವಯೋಸಹಜ ಕಾಯಿಲೆಯಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಬೆಡ್ ಸಿಗದೆ ಪರದಾಡಿದ್ದಾರೆ. ಬೆಡ್ ಸಿಗದ ಹಿನ್ನೆಲೆ ಶಾಸಕಿ ಕುಸುಮಾವತಿ ಶಿವಳ್ಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಕೂಡಲೇ ಸಿದ್ಧರಾಮಯ್ಯ ಕಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರ ಕರ್ನಾಟಕದ ಸಂಜೀವಿನಿ ಎಂದು ಖ್ಯಾತಿ ಪಡೆದ ಕಿಮ್ಸ್ನಲ್ಲಿ ಈಗಾಗಲೇ ಬೆಡ್ ಫುಲ್ ಆಗಿದೆಯೇ ಎಂಬ ಅನುಮಾನ ಶುರುವಾಗಿದೆ. ಅಲ್ಲದೆ ಶಾಸಕರು ತಮ್ಮೆಲ್ಲಾ ಪ್ರಭಾವನ್ನು ಬಳಸಿದರೂ ಆಸ್ಪತ್ರೆಗಳಲ್ಲಿ ಒಂದೂ ಬೆಡ್ ಸಿಗುತ್ತಿಲ್ಲ. ಹಾಗಾಗಿ ಶಾಸಕಿ ಕುಸುಮಾವತಿ ಶಿವಳ್ಳಿ, ಸಿದ್ದರಾಮಯ್ಯ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಶಾಸಕಿಯ ಅಸಹಾಯಕ ಪರಿಸ್ಥಿತಿ ಕಂಡು ಮರುಗಿದ ಸಿದ್ದರಾಮಯ್ಯ ಕೂಡಲೇ ಕಿಮ್ಸ್ಗೆ ಕರೆ ಮಾಡಿದ್ದಾರೆ. ಕಿಮ್ಸ್ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಯಾರಿಗೂ ಬೆಡ್ ನಿರಾಕರಿಸಬೇಡಿ ಎಂದು ತಾಕೀತು ಮಾಡಿದ್ದಾರೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧವೂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿ ಎಂದು ಹರಿಹಾಯ್ದಿದ್ದಾರೆ.