ಹುಬ್ಬಳ್ಳಿ: ಅತಿವೃಷ್ಟಿಯಿಂದ ಮನೆ, ಆಸ್ತಿ-ಪಾಸ್ತಿ, ಜಾನುವಾರು ಕಳೆದುಕೊಂಡು ಸಂತ್ರಸ್ತರಾಗಿರುವ ಜಿಲ್ಲೆಯ ಜನತೆಗೆ ಸಾಧ್ಯವಾದಷ್ಟು ತ್ವರಿತವಾಗಿ ಪರಿಹಾರ ನೀಡುವ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ನೆರೆಯಿಂದ ತತ್ತರಿಸಿರುವ ಜನರಲ್ಲಿ ಭರವಸೆ ಮೂಡಿಸುವ ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವ ರಜೆಗಳನ್ನೂ ಪಡೆಯದೇ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ನೀಡಿರುವ ನಿರ್ದೇಶನದ ಅನುಸಾರ, ಕುಂದಗೋಳ ತಾಲೂಕಿನ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಕಳೆದ ಒಂದು ವಾರದಿಂದ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪರಿಹಾರದ ಚೆಕ್‌ಗಳನ್ನು ಸಿದ್ಧಪಡಿಸಲು ನಿನ್ನೆ (ಅಗಸ್ಟ್11) ರಾತ್ರಿಯಿಂದ ಇಂದು (ಅಗಸ್ಟ್ 12) ನಸುಕಿನ ಜಾವದವರೆಗೂ ತಹಶೀಲ್ದಾರ್ ಬಸವರಾಜ ಮೆಳವಂಕಿ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸಿ ಜನತೆಯ ನೋವಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಈಗ ಜನರ ಪ್ರಶಂಸೆಗೆ ಪಾತ್ರವಾಗಿದೆ.