ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಿನೇಷನ್ ಮಾಡಿದ್ದ ಜೆಡಿಎಸ್ನ ಹಜರತ್ ಅಲಿ ಜೋಡಮನಿ ಅವರು ನಾಮಪತ್ರ ವಾಪಸ್ ಪಡೆದುಕೊಂಡರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರೆಡ್ಡಿ, ಕಾಂಗ್ರೆಸ್ನ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ್ ಹಾಗೂ ಕೆಪಿಸಿಸಿ ಸದಸ್ಯ ಅರವಿಂದ ಪಾಟೀಲ್ ಅವರ ಜೊತೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಹಜರತ್ ಅಲಿ ಜೋಡಮನಿ ನಾಮಪತ್ರ ವಾಪಸ್ ಪಡೆದುಕೊಂಡರು. ಕಳೆದ ಬಾರಿ ಜೆಡಿಯುನಿಂದ ಸ್ಪರ್ಧಿಸಿದ್ದ ಜೋಡಮನಿ 7,890 ಮತ ಪಡೆದಿದ್ದರು. ಹೀಗಾಗಿ ಮೈತ್ರಿ ಅಭ್ಯರ್ಥಿಗೆ ಕಂಟವಾಗುವ ಸಾಧ್ಯತೆಯಿತ್ತು.
ಈ ಬಗ್ಗೆ ಮಾತನಾಡಿದ ಎನ್.ಹೆಚ್.ಕೊನರೆಡ್ಡಿ, ಪಕ್ಷದ ವರಿಷ್ಠರ ಸೂಚನೆ ಮೇರೆಗೆ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಕುಸುಮಾ ಶಿವಳ್ಳಿಯವರ ಗೆಲುವಿಗಾಗಿ ಶ್ರಮಿಸುತ್ತಾರೆ. ಅವರು ಯಾವುದೇ ಬೇಡಿಕೆ ಇಟ್ಟಿಲ್ಲ. ಕಾಂಗ್ರೆಸ್ ಜತೆ ನಾವು ಬೀಗತನ ಮಾಡಿದ್ದೇವೆ. ಒಟ್ಟಿಗೆ ಚುನಾವಣೆ ಎದುರಿಸುತ್ತೇವೆ ಎಂದರು.
ಇದೇ ವೇಳೆ ಮಾತನಾಡಿದ ಹಜರತ್ ಅಲಿ, ಪಕ್ಷದ ವರಿಷ್ಠರ ಮಾತಿಗೆ ಗೌರವ ಕೊಟ್ಟು ನಾಮಪತ್ರ ಹಿಂದಕ್ಕೆ ಪಡೆದಿದ್ದೇನೆ. ಮೈತ್ರಿ ಅಭ್ಯರ್ಥಿ ಕುಸುಮಾ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.