ಹುಬ್ಬಳ್ಳಿ: ಹೆಚ್ಚುತ್ತಿರುವ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ವ್ಯಾಪಕ ಕ್ರಮ ಕೈಗೊಳ್ಳುತ್ತಿವೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ದಿನದ 24 ಗಂಟೆಗಳ ಕಾಲ ಕೋವಿಡ್ ಸ್ವ್ಯಾಬ್ ಸಂಗ್ರಹ, ಸೋಂಕಿತರ ಭೌತಿಕ ತಪಾಸಣೆ (ಫಿಜಿಕಲ್ ಟ್ರಯೇಜಿಂಗ್) ಹಾಗೂ ಚಿಕಿತ್ಸೆಗೆ ದಾಖಲಿಸುವ ವ್ಯವಸ್ಥೆಗಳನ್ನು ಪ್ರಾರಂಭಿಸಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ ತಿಳಿಸಿದ್ದಾರೆ.
ಹಿಂದಿನ ಎರಡು ಕೋವಿಡ್ ಅಲೆಗಳನ್ನು ಹುಬ್ಬಳ್ಳಿಯ ಕಿಮ್ಸ್ ಸಮರ್ಥವಾಗಿ ಎದುರಿಸಿ, ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸಿದೆ. ಈ ಅನುಭವದ ಆಧಾರದಲ್ಲಿ ಪ್ರಸ್ತುತ 3ನೇ ಅಲೆಯನ್ನ ನಿರ್ವಹಿಸಲು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಅಣಿಗೊಳಿಸಲಾಗಿದೆ. ದಿನದ 24 ಗಂಟೆಗಳ ಕಾಲ ಇಲ್ಲಿ ಸೇವೆಗಳು ಸಿಗಲಿವೆ.
24 ಗಂಟೆಗಳ ಕಾಲ ಸ್ವ್ಯಾಬ್ ಸಂಗ್ರಹ:
ಆವರಣದ ಮೇಕ್ ಶಿಫ್ಟ್ ಆಸ್ಪತ್ರೆಯ ಒಂದು ಭಾಗದಲ್ಲಿ ಮತ್ತೊಂದು ಸ್ವ್ಯಾಬ್ ಸಂಗ್ರಹಣೆ ಘಟಕ ಕಾರ್ಯಾರಂಭಿಸಿದೆ. ದಿನದ 24 ಗಂಟೆಗಳ ಕಾಲ ಅಲ್ಲಿ ಸ್ವ್ಯಾಬ್ ಸಂಗ್ರಹಿಸಲಾಗುತ್ತದೆ. ಸಂಶಯಾಸ್ಪದ ಲಕ್ಷಣಗಳಿರುವ ಯಾವುದೇ ವ್ಯಕ್ತಿ ಅಲ್ಲಿಗೆ ಬಂದು ತಪಾಸಣೆಗೆ ಒಳಪಡಬಹುದು.
ಸೋಂಕು ದೃಢಪಟ್ಟ ವ್ಯಕ್ತಿಗಳ ಭೌತಿಕ ತಪಾಸಣೆ(ಫಿಜಿಕಲ್ ಟ್ರಯೇಜಿಂಗ್ ) ಕೈಗೊಳ್ಳಲು ಇದೇ ಮೇಕ್ ಶಿಫ್ಟ್ ಆಸ್ಪತ್ರೆಯ ಒಂದು ಭಾಗದಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿ ಸೋಂಕಿತರನ್ನು ಖುದ್ದಾಗಿ ಪರಿಶೀಲಿಸಿದ ಬಳಿಕ ಅಗತ್ಯಕ್ಕನುಗುಣವಾಗಿ ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಸೂಚಿಸಲಾಗುವುದು.
ಕಿಮ್ಸ್‌ನ ವೇದಾಂತ ಕೋವಿಡ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಕೋವಿಡ್ ಕ್ಯಾಸುವಲ್ಟಿ ಪ್ರಾರಂಭಿಸಲಾಗಿದೆ. ದಿನದ 24 ಗಂಟೆಗಳ ಕಾಲ ಇಲ್ಲಿ ಕೋವಿಡ್ ಸೋಂಕಿತರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಗುತ್ತದೆ. ಬೆಡ್, ವೈದ್ಯಕೀಯ ಆಮ್ಲಜನಕ ಸೇರಿದಂತೆ ಎಲ್ಲ ಅಗತ್ಯ ಪರಿಕರಗಳು ಇಲ್ಲಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ವೈಯಕ್ತಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ, ಪದೇ ಪದೆ ಸಾಬೂನಿನಿಂದ ಕೈ ತೊಳೆಯುವ ಮೂಲಕ ಸೋಂಕು ಬಾರದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವುದು ಅಗತ್ಯವಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: 'ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ': ವಿಶ್ವ ಆರ್ಥಿಕ ವೇದಿಕೆ ಉದ್ದೇಶಿಸಿ ಮೋದಿ ಭಾಷಣ