ಧಾರವಾಡ: 68ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸದರು. ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಬಳಿಕ ಮಾತನಾಡಿದ ಸಚಿವರು, ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ದೊರೆತಿರುವ ಪ್ರಾಮುಖ್ಯತೆಯಂತೆ ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿ ಕೂಡ ಮಹತ್ವ ಪಡೆದಿದೆ. ಕರ್ನಾಟಕ ಏಕೀಕರಣದ ಚಳವಳಿಯು ನಮ್ಮ ಧಾರವಾಡ ನೆಲದಲ್ಲಿ ಪ್ರಾರಂಭವಾಗಿದ್ದು, ಈ ಸಂಗತಿ ನಮ್ಮೆಲ್ಲರ ಅಭಿಮಾನದ ಸಂಕೇತ ಎಂದು ಹೇಳಿದರು.
ಕರ್ನಾಟಕ ಏಕೀಕರಣ ಚಳವಳಿಯಲ್ಲಿ ರಾ.ಹ.ದೇಶಪಾಂಡೆ ಅವರು, ಡೆಪ್ಯೂಟಿ ಚನ್ನಬಸಪ್ಪ, ಅದರಗುಂಚಿ ಶಂಕರಗೌಡ ಪಾಟೀಲರು ಸೇರಿದಂತೆ ಧಾರವಾಡ ಜಿಲ್ಲೆಯ ಪ್ರಮುಖರು ಭಾಗವಹಿಸಿದ್ದರು. ಸುಮಾರು 19 ಆಡಳಿತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟೀಷರ ಆಡಳಿತದ ನಂತರದ 1956 ರಲ್ಲಿ ಪುನಃ ಒಂದಾಗಿ ಮೈಸೂರು ರಾಜ್ಯದಲ್ಲಿ ವಿಲೀನಗೊಂಡವು. ಈ ಏಕೀಕರಣದ ನಂತರ 1973 ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಮರು ನಾಮಕರಣ ಮಾಡಲಾಯಿತು. 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವರ್ಷ 'ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಘೋಷಣೆ ಅಡಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ 'ಕನ್ನಡ-ಕನ್ನಡಿಗ-ಕರ್ನಾಟಕ' ಎಂಬ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಧಾರವಾಡ ಜಿಲ್ಲೆಯವರೇ ಆದ ಪಂಪ, ಕುಮಾರವ್ಯಾಸ, ಡಾ.ದ.ರಾ.ಬೇಂದ್ರೆ, ಡಾ.ವಿ.ಕೃ.ಗೋಕಾಕ, ಡಾ. ಗಿರೀಶ್ ಕಾರ್ನಾಡ್ ಅವರನ್ನು ಸ್ಮರಿಸುವುದು ಹೆಮ್ಮೆಯ ವಿಷಯ. ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ ಎಂದು ಸ್ಮರಿಸಿದರು.
ಇನ್ನು ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದು, ಜನಪರ ಯೋಜನೆಗಳನ್ನು ನೀಡಿದೆ. ಶಕ್ತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೂ 3.74 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, 78.69 ಕೋಟಿ ರೂ. ಮೊತ್ತದ ಸೇವೆ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 2,28,690 ಫಲಾನುಭವಿಗಳಿಗೆ ರೂ.65.74 ಕೋಟಿಯನ್ನು ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 3,87,193 ಕುಟುಂಬಗಳಿಗೆ 53,33 ಕೋಟಿಗಳನ್ನು ವಿತರಿಸಲಾಗಿದೆ. 4,63,983 ಗೃಹ ಬಳಕೆದಾರರು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದರು.
ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. 212.00 ಕೋಟಿ ರೂ. ಪರಿಹಾರ ಒದಗಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಬರಗಾಲವಿದ್ದರು ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಎಸ್ಪಿ ಗೋಪಾಲ ಬ್ಯಾಕೋಡ್ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : 68 ನೇ ಕರ್ನಾಟಕ ರಾಜ್ಯೋತ್ಸವ : ಕಂಠೀರವ ಸ್ಟೇಡಿಯಂನಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ: ಸರ್ಕಾರ ಪತನದ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಆ ವಿಚಾರದ ಬಗ್ಗೆ ರಮೇಶ್ ಜಾರಕಿಹೊಳಿ ಅವರನ್ನೇ ಕೇಳಿ ಎಂದು ಕುಟುಕಿದರು. ಚುನಾವಣೆ ಮತ್ತು ಅಧಿಕಾರದಲ್ಲಿ ಮಾತ್ರ ಬಿಜೆಪಿಗೆ ಆಸಕ್ತಿಯಿದೆ. ನೂರು ದಿನ ಆಯ್ತು ಸರ್ಕಾರ ಬಂದು ಇನ್ನೂ ಅದನ್ನೇ ಹೇಳುತ್ತಾ ಕುಳಿತಿದ್ದಾರೆ. ಸರ್ಕಾರ ಬೀಳಿಸುತ್ತೇನೆ ಅಂತ ಹೇಳುತ್ತಲೇ ಇದ್ದಾರೆ. ಅದೇನು ಆಟವಾ?, ಮಹಾರಾಷ್ಟ್ರ ಮಾದರಿ, ಆ ಮಾದರಿ, ಈ ಮಾದರಿ ಅಂತಾರೆ. ಸರ್ಕಾರ ಕೆಡುಗುವ ಬಗ್ಗೆ ಹೇಳಿದವರನ್ನೇ ಹೆಚ್ಚು ಕೇಳಿ ಎಂದರು.