ಧಾರವಾಡ: 'ಕುಂಬಳ' ಕ್ರೀಡೆಯಲ್ಲಿ 'ಹೋರಿ'ಯನ್ನು ಓಡಿಸಲಾಗುತ್ತದೆ. ಮಂಗಳೂರಿನ ಕುಂಬಳ ಕ್ರೀಡೆ ನೋಡಲು ನಾನೂ ಸಹ ತೆರಳಿದ್ದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಪ್ಪಾಗಿ ಮಾತನಾಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿಹಬ್ಬ-2020 ಕಾರ್ಯಕ್ರಮದ ವೇಳೆ ಶೆಟ್ಟರ್ ಈ ಯಡವಟ್ಟು ಮಾಡಿದರು.
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ಕುಸ್ತಿಹಬ್ಬ ಉದ್ಘಾಟಿಸಿ ಮಾತನಾಡುವಾಗ ಸಚಿವ ಜಗದೀಶ ಶೆಟ್ಟರ್ ಅವರಿಂದ ತುಂಬಿದ ಸಭೆಯಲ್ಲಿ ಕಂಬಳದಲ್ಲಿ ಕೋಣದ ಬದಲಿಗೆ ಹೋರಿ ಎಂದರು. ಹಾಗೆಯೇ ಕಂಬಳ ಎನ್ನುವ ಬದಲಿಗೆ ಕುಂಬಳ ಎಂದು ಹೇಳಿದರು. ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ದೇಶದ ಗಮನ ಸೆಳೆದ ಶ್ರೀನಿವಾಸಗೌಡರ ಸಾಧನೆ ಗುರುತಿಸಿದ ಬಗ್ಗೆ ವಿವರಿಸುವಾಗ ಸಚಿವರು ಯಡವಟ್ಟು ಮಾಡಿಕೊಂಡರು. ಅಲ್ಲದೇ ಇಂದು ಹಳ್ಳಿಗಳಲ್ಲಿ ಗರಡಿ ಮನೆಗಳು ನಶಿಸಿಹೋಗಿವೆ. ಈ ಭಾಗದಲ್ಲಿ ಕುಸ್ತಿ ಶುರುವಾದ ಮೇಲೆ ಈ ಬಗ್ಗೆ ಚರ್ಚೆ ಶುರುವಾಗುತ್ತೆ ಎಂದು ಶೆಟ್ಟರ್ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ನಿಮ್ಮ ಮಕ್ಕಳಿಗೆ ಮೊಬೈಲ್- ಟಿವಿ ನೋಡೋದನ್ನು ಮೊದಲು ಬಿಡಿಸಬೇಕು. ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಕುಸ್ತಿಗೆ ವಿಶೇಷ ಉತ್ತೇಜನ ಕೊಡಲು ಹುಬ್ಬಳ್ಳಿ ಸಮೀಪ ತಾರಿಹಾಳದಲ್ಲಿ 150 ಕೋಟಿ ವೆಚ್ಚದಲ್ಲಿ ಕ್ರೀಡಾ ಗ್ರಾಮ ನಿರ್ಮಾಣ ಮಾಡಲಾಗುವುದು. ಈ ಅನುದಾನದಲ್ಲಿ ಕುಸ್ತಿಗಾಗಿ ಬಳಸಿಕೊಳ್ಳಲು ಡಿಸಿಗೆ ಸೂಚನೆ ನೀಡಲಾಗುವುದು. ಕೇಂದ್ರ ಸರ್ಕಾರ ಕ್ರೀಡೆಗಾಗಿ ವಿಶೇಷ ಪ್ರೋತ್ಸಾಹ ಅನುದಾನ ಕೊಡುತ್ತಿದೆ. ಈ ಕುಸ್ತಿಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು.