ಧಾರವಾಡ : ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸದಲ್ಲಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಇಂದು (ಗುರುವಾರ) ಧಾರವಾಡ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಜಿಲ್ಲಾಸ್ಪತ್ರೆಯ ಔಷಧ ವಿತರಣಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಔಷಧ ವಿತರಣಾ ವಿಭಾಗದಲ್ಲಿನ ದಾಖಲೆಗಳನ್ನು ಕೇಳಿದರು. ಯಾರಿಗೆ ಎಷ್ಟು ಔಷಧ, ಮಾತ್ರ ಕೊಟ್ಟಿದ್ದೀರಿ ಎಂಬ ಮಾಹಿತಿ ಇದೆಯಾ ಎಂದು ಲೋಕಾಯುಕ್ತರು ಕೇಳಿದಾಗ ಮ್ಯಾನುವಲ್ನಲ್ಲಿ ಮಾತ್ರ ದಾಖಲಿಸಿದ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರು. ನಂತರ ಆಯಾ ಸಮಯದ ವಿತರಣೆಯನ್ನು ಕಂಪ್ಯೂಟರ್ ನಲ್ಲಿಯೇ ದಾಖಲಿಸುವಂತೆ ಲೋಕಾಯುಕ್ತರು ಸೂಚಿಸಿದರು. ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ಹೆರಿಗೆ ವಿಭಾಗ ಸೇರಿದಂತೆ ಎಲ್ಲ ವಿಭಾಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಸಮಸ್ಯೆಗಳನ್ನು ಆಲಿಸಿದರು.
ಆಸ್ಪತ್ರೆ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಧಾರವಾಡ ಜಿಲ್ಲಾಸ್ಪತ್ರೆ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅದರ ಆಧಾರದ ಮೇಲೆ ನಾವು ದೂರು ದಾಖಲಿಸಿಕೊಂಡು ಪರಿಶೀಲನೆ ಬಂದಿದ್ದೇವೆ. ಇಲ್ಲಿ ವೈದ್ಯರ ಕೊರತೆ ಇದೆ. ಸ್ಥಳದ ಕೊರತೆ ಇದೆ. ಔಷಧ ವಿತರಣೆ ವ್ಯವಸ್ಥೆ ಸರಿಯಾಗಿ ಇಲ್ಲ. ಸರಿಯಾದ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ. ಎಷ್ಟು ಔಷಧ ಬಂದಿದೆ? ಎಷ್ಟು ಔಷಧಿ ವಿತರಣೆಯಾಗಿದೆ? ಎಂಬುದರ ಲೆಕ್ಕ ಇಲ್ಲ. ಅದರ ಬಗ್ಗೆ ದೂರು ದಾಖಲಿಸಿಕೊಂಡಿದ್ದೇವೆ. 8 ದಿನಗಳ ಒಳಗೆ ಇದು ಸರಿಯಾಗಬೇಕು. 8 ದಿನಗಳ ಬಳಿಕ ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ನಮ್ಮ ಎಸ್ಪಿಗೆ ಸೂಚಿಸಿದ್ದೇವೆ. ನಾವು ನೋಡಿದ ಕುಂದು ಕೊರತೆ ಎಲ್ಲ ಸರಿಯಾಗಬೇಕು. ಇಲ್ಲದೇ ಹೋದಲ್ಲಿ ಗಂಭೀರವಾಗಿ ತೆಗೆದುಕೊಳ್ಳಿತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಸ್ತೆ ಸರಿ ಮಾಡುವಂತೆ ಆಯುಕ್ತರಿಗೆ ಸೂಚನೆ: ಓಡಾಡುವ ರಸ್ತೆಯಲ್ಲಿ ಗುಂಡಿ ಇರುವುದರಿಂದ ಇಲ್ಲೇ ಬಿದ್ದು ಇಲ್ಲೇ ದಾಖಲಾಗುವ ಸ್ಥಿತಿ ಇದೆ. ರಸ್ತೆ ಸರಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ. ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ಜನ ಬರುತ್ತಾರೆ. ಹೀಗಾಗಿ ಮ್ಯಾನೇಜ್ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿದ್ದಾರೆ. ಈಗ ಎಲ್ಲವನ್ನೂ ನೋಡಿ ಬಂದಿದ್ದೇವೆ. ತಾಯಿ ಮತ್ತು ಮಗು ವಿಭಾಗ ಚೆನ್ನಾಗಿ ನಿರ್ವಹಣೆ ಆಗುತ್ತಿದೆ. ಆದರೆ, ಇಲ್ಲಿ ಬೆಡ್ ಸಾಮರ್ಥ್ಯ ಕಡಿಮೆ ಇದೆ. ಹೆರಿಗೆ ವಿಭಾಗಕ್ಕೆ ಇನ್ನು ಬೆಡ್ ಗಳು ಬೇಕು ಎಂದು ಕೇಳಿದ್ದಾರೆ. ಸಿಬ್ಬಂದಿ ಸಹ ಬೇಕು ಎಂದಿದ್ದಾರೆ. ಅದನ್ನು ನಾವು ದಾಖಲಿಸಿಕೊಂಡಿದ್ದೇವೆ ನಾವು ಈ ವಿಷಯ ಸರ್ಕಾರಕ್ಕೆ ಬರೆಯುತ್ತೇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ತಿಳಿಸಿದರು.
ಪರಿಶೀಲನೆ ವೇಳೆ ಅನೇಕ ಲೋಪದೋಷಗಳನ್ನು ಬರೆದುಕೊಂಡಿದ್ದೇವೆ. ನಮ್ಮ ಕೇಸ್ನಲ್ಲಿ ಅದನ್ನೆಲ್ಲ ಸವಿಸ್ತಾರವಾಗಿ ಸೇರಿಸುತ್ತೇವೆ. ಈ ಬಗ್ಗೆ ನಮ್ಮ ಎಸ್ಪಿಯಿಂದ ವರದಿ ತೆಗೆದುಕೊಳ್ಳುತ್ತೇವೆ. ಔಷಧ ವಿತರಣೆ ಲೆಕ್ಕ ಇಲ್ಲದೇ ಕೆಲಸ ನಡೆದಿದೆ. ಲೆಕ್ಕ ಇಲ್ಲದಿದ್ದರೆ ಯಾರು ಎಷ್ಟು ತಿಂದು ಹೋದರು ಅಂತಾ ಗೊತ್ತಾಗುವುದಿಲ್ಲ. ಬರೆದಿಡಲು ಇಬ್ಬರೇ ಇದ್ದೇವೆ ಅಂತಾ ಸಮಜಾಯಿಸಿ ಹೇಳಿದ್ದಾರೆ. ಹೀಗಾಗಿ ನೆಪ ಹೇಳಬೇಡಿ ಇನ್ನೊಬ್ಬರನ್ನು ನೇಮಿಸಿಕೊಳ್ಳಿ ಎಂದಿದ್ದೇವೆ. ಬರೆದಿಟ್ಟುಕೊಳ್ಳದಿದ್ದರೇ ಲಕ್ಷಾಂತರ ರೂಪಾಯಿ ನಷ್ಟ ಆಗುತ್ತದೆ. ಹೀಗಾಗಿ ನಾವು ಕೇಸ್ ರಿಜಿಸ್ಟರ್ ಮಾಡಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ :ನಿಮ್ಹಾನ್ಸ್ನಲ್ಲಿ ಮಗು ಸಾವು ಘಟನೆ ಸಂಬಂಧ ವರದಿ ಕೇಳಿದ್ದು, ಬಳಿಕ ನಿರ್ಧಾರ: ಸಚಿವ ದಿನೇಶ್ ಗುಂಡೂರಾವ್