ಧಾರವಾಡ: ನಾನು ಸಿಎಂ ಹುದ್ದೆ ಅಪೇಕ್ಷೆ ಪಟ್ಟಿಲ್ಲ. ಪಕ್ಷ ಏನು ನಿರ್ಣಯ ಮಾಡುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ. ಈ ಬಗ್ಗೆ ಪಕ್ಷ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ ಸಿಂಗ್‌ರ ಅಸಮಾಧನ ವಿಚಾರ ಅವರು ತಪ್ಪೋ, ನಮ್ಮ ತಪ್ಪೋ ಎಂಬುವುದು ಮೇ 2ಕ್ಕೆ ಗೊತ್ತಾಗುತ್ತದೆ. ನಾಯಕರನ್ನು ಮಾಡುವುದು ರಾಜ್ಯದ ಜನರೇ ಹೊರತು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಲ್ಲ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಬಂದಿದೆ ಎಂದರು.
ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಬಿಜೆಪಿಯ ಬಹುತೇಕ ಶಾಸಕರಿಗೆ ಸಮಾಧಾನ ಇಲ್ಲ. ಶಾಸಕರ ಕೆಲಸ ಆಗುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯುತ್ತಿಲ್ಲ. ಸಭೆ ಕರೆದರೆ ಎಲ್ಲರೂ ಮುಗಿಬೀಳುತ್ತಾರೆ ಎಂಬ ಭಯ ಯಡಿಯೂರಪ್ಪ ಅವರಿಗೆ ಇದೆ ಎಂದು ಹೇಳಿದರು.
ಯತ್ನಾಳ ಹೇಳುವುದು ಸುಳ್ಳು ಎಂದು ಅರುಣ ಸಿಂಗ್ ಹೇಳುತ್ತಾರೆ. ಶಾಸಕರ ಭಾವನೆ ತಿಳಿದುಕೊಳ್ಳದಿದ್ದರೆ ಅವರು ಉಸ್ತುವಾರಿ ಆಗಿದ್ದು ಏನು ಪ್ರಯೋಜನಾ? ಅವರನ್ನು ಉಸ್ತುವಾರಿಯಾಗಿ ಮಾಡಿದ್ದಾರೂ ಏಕೆ ಎಂದು ಹರಿಹಾಯ್ದರು.
ಪಕ್ಷದ ನೋಟಿಸ್ಗೆ ಉತ್ತರ ಕೊಟ್ಟು ಅರವತ್ತು ದಿನ ಆಯ್ತು. ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ಅರುಣ ಸಿಂಗ್‌ರಿಗೆ ಪ್ರೀತಿ ಏಕೋ ತಿಳಿಯದು. ಆ ಮಹಾಲಕ್ಷ್ಮಿ ತಾಯಿ, ಧನ ಲಕ್ಷ್ಮಿಗೆ ಗೊತ್ತು. ಆದರೆ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದೇ ಯಡಿಯೂರಪ್ಪ ಅವರ ಕೊನೆಯ ಕನಸು. ಧೃತರಾಷ್ಟ್ರ ತನ್ನ ಮಗ ದುರ್ಯೋಧನ ಅಯೋಗ್ಯನಾಗಿದ್ದರೂ ಪಟ್ಟಕ್ಕೇರಿಸಿದ್ದ. ಅದೇ ಕೆಲಸವನ್ನು ಯಡಿಯೂರಪ್ಪ ಮಾಡಲು ಹೊರಟಿದ್ದಾರೆ. ಶೀಘ್ರವೇ ಅವರ ಕುಟುಂಬ ರಾಜಕಾರಣ ಕೊನೆಯಾಗಲಿದೆ ಎಂದರು.