ಧಾರವಾಡ : ಲಾಕ್ಡೌನ್ ಸಡಿಲಿಕೆಯಿಂದ ಕೊರೊನಾ ಹೆಚ್ಚಾಗುತ್ತಿದೆ. 24,386 ಜನರನ್ನು ಟೆಸ್ಟಿಂಗ್ ಮಾಡಲಾಗಿದೆ. 23,783 ಸ್ಯಾಂಪಲ್ ನೆಗಟಿವ್ ಬಂದಿವೆ 468 ವರದಿ ಬಾಕಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಸಿಟಿವ್ ಬಂದಿರುವುದು 311 ಜನರಲ್ಲಿ, ಇವರಲ್ಲಿ 166 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 139 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾದಿಂದಾಗಿ 6 ಜನ ಮೃತಪಟ್ಟಿದ್ದು, ಕೊರೊನಾ ಸೋಂಕಿತರನ್ನು 10 ದಿನದಲ್ಲಿ ಬಿಡುಗಡೆ ಮಾಡಬೇಕು ಎಂದು ಗೈಡ್ ಲೈನ್ ಬಂದಿದೆ ಎಂದು ಮಾಹಿತಿ ನೀಡಿದರು.
ಜನರೇ ಸ್ವತಃ ಎಚ್ಚೆತ್ತುಕೊಳ್ಳಬೇಕು. ಮಾಸ್ಕ್ ಬಳಸಿ, ಸ್ಯಾನಿಟೈಸರ್ ಬಳಕೆ ಮಾಡಬೇಕು. ಮೊರಬ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿದೆ. ಮೊರಬ ಗ್ರಾಮದಿಂದ ಯಾರು ಹೊರ ಹೊಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಗ್ರಾಮದಿಂದ ಗ್ರಾಮಕ್ಕೆ ತೆರಳುವುದರಿಂದ ಸಹ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುತ್ತಿದೆ. ಖಾಸಗಿ ಆಸ್ಪತ್ರೆಯ ವೈದ್ಯರ ಸಭೆ ನಡೆಸಲಾಗಿದೆ. ಕೋವಿಡ್ ಸೋಂಕಿತರಿಗಾಗಿ ಜಿಲ್ಲೆಯಲ್ಲಿ 17 ಖಾಸಗಿ ಆಸ್ಪತ್ರೆ ಗಳನ್ನು ರಿಸರ್ವ್ ಮಾಡಲಾಗಿದೆ. ಜಿಲ್ಲೆಯಲ್ಲಿ 6000 ಬೆಡ್ ಗಳು ಸಿದ್ದವಿದ್ದು, ನಾವೂ ಈಗಾಗಲೇ ಖಾಸಗಿ ಆಸ್ಪತ್ರೆಗಳು ಮತ್ತು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದ್ದೇವೆ ಎಂದರು.