ಹುಬ್ಬಳ್ಳಿ: ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತನ ಬಂಧನ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಸುತ್ತಿದೆ. ಇದರ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕೈವಾಡ ಇದೆ. ಲೋಕಸಭೆಗೆ ಇದರ ಲಾಭ ಪಡೆಯುವ ಹುನ್ನಾರ ಅವರದ್ದು ಎಂದು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಧಾರ್ಮಿಕ, ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದೆ. ಈ ವಿಷಯಗಳ ಮೇಲೆ ಅಧಿಕಾರ ಹಿಡಿಯುವ ಕನಸು ಕಾಣುತ್ತದೆ. ಈ ಹಿಂದೆ ನಾನು ಮುಖ್ಯಮಂತ್ರಿ, ಶಾಸಕನಾಗಿದ್ದಾಗ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಜಾಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಲ್ಲದೇ 30 ವರ್ಷಗಳ ಹಳೆಯ ಹೋರಾಟದ ಪ್ರಕರಣಗಳನ್ನು ಪರಿವೀಕ್ಷಣೆ ಮಾಡಲು ತಿಳಿಸಿದ್ದೆ. ಈ ಹಿಂದೆ ಬಿಜೆಪಿ 7-8 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಆವಾಗಲೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಅಭಿಮಾನ ಇದ್ದರೆ ಕೇಸ್ಗಳನ್ನು ವಜಾಗೊಳಿಸಬೇಕಿತ್ತು. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕೆಂದು ಶೆಟ್ಟರ್ ಒತ್ತಾಯಿಸಿದರು.
ಶ್ರೀಕಾಂತ್ ಪೂಜಾರಿ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡುವ ಆರ್.ಅಶೋಕ್ ಈ ಹಿಂದೆ ಗೃಹ ಸಚಿವರಾಗಿದ್ದಾಗ ಆಗ ಯಾಕೆ ಕೇಸ್ ಹಿಂದೆ ಪಡೆಯಲಿಲ್ಲ. ಇದೀಗ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಇಂತಹ ವಿಷಯಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಲೋಕಸಭಾ ಚುನಾವಣೆಯ ಗಿಮಿಕ್. ಸದ್ಯ ಈ ಪ್ರಕರಣ ಕೋರ್ಟ್ನಲ್ಲಿದೆ. ಬಿಜೆಪಿಯವರು ಹೋರಾಟಗಾರರ ಮೇಲೆ ಕಾಳಜಿ ಇದ್ದರೆ ಬೇಲ್ ಕೊಡಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಬೀದಿಗೆ ಇಳಿದು ಹೋರಾಟ ಮಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ನಾವು ಕಾನೂನು ಬಿಟ್ಟು ಏನೂ ಮಾಡಿಲ್ಲ, ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ: ಪರಮೇಶ್ವರ್