ಹುಬ್ಬಳ್ಳಿ: ಹುಬ್ಬಳ್ಳಿ ನೈರುತ್ಯ ರೈಲ್ವೆ ಕಚೇರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ವಿಧಾನಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ ಮಾರ್ಗದ ಬಗ್ಗೆ ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ ಮಾರ್ಗದ ಅನುಷ್ಠಾನ ಮತ್ತು ಕಾನೂನು ಹಾಗೂ ಪರಿಸರ ತೊಡಕುಗಳಿಂದ ಅಡತಡೆ ಉಂಟಾಗಿತ್ತು. ಇತ್ತೀಚೆಗೆ ಹೈಕೋರ್ಟ್ನಲ್ಲಿ ದಾಖಲಾಗಿದ್ದ ಸಾರ್ವಜನಿಕ ರಿಟ್ ಅರ್ಜಿಗಳು ಇತ್ಯರ್ಥ ಆದ ಮೇಲೆ ಈಗ ಆ ಯೋಜನೆಗೆ ತೀವ್ರಗತಿಯಿಂದ ಚಾಲನೆ ದೊರೆತಿದೆ. ಅದಕ್ಕಾಗಿ ಇದರ ಬಗ್ಗೆ ಆದಷ್ಟು ಬೇಗನೆ ಸರ್ವೆ ಮತ್ತು ಕಾಮಗಾರಿ ಚಾಲನೆಗೆ ಬೇಕಾದ ವರದಿ ತಯಾರಿಕೆ ಹಾಗೂ ತೀವ್ರಗತಿಯ ಕಾಮಗಾರಿ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಜಗದೀಶ್ ಶೆಟ್ಟರ್ ಸೂಚಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬೇಕಾದ ಸಹಕಾರ ಕೊಡಿಸುವ ಭರವಸೆಯನ್ನು ಶೆಟ್ಟರ್ ನೀಡಿದರು. ಹುಬ್ಬಳ್ಳಿ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಸಂಜೀವ ಕಿಶೋರ ಮಾತನಾಡಿ, ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ.
ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ನಿರ್ದೇಶನದ ಮೇರೆಗೆ ಫೋರ್-ವೇ (4 ವೇ-ಮಾರ್ಗ) ರೈಲ್ವೆ ಮಾರ್ಗದ ಯೋಜನೆಗೆ ಮತ್ತು ಇಂಟಿಗ್ರೇಟೆಡ್ ಟ್ರಾನ್‌ಫೋರ್ಟ್ (ರೋಡ್, ರೇಲ್ & ಬಂದರು) ಪ್ರಾಜೆಕ್ಟ್ ತಯಾರಿಸಲು ಸರ್ವೆ ಪ್ರಾರಂಭ ಮಾಡಿದ್ದೇವೆ. ಸರ್ವೆ ಮುಗಿದ ತಕ್ಷಣ ಸರ್ವೆ ರಿಪೋರ್ಟ್ನ್ನು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್‌ಗೆ ಸಲ್ಲಿಸಲಾಗುವುದು. ಬೋರ್ಡ್ನವರ ಒಪ್ಪಿಗೆ ದೊರೆತ ನಂತರ ಮುಂದಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಕಾನೂನು ಮತ್ತು ಪರಿಸರ ಸಂಬಂಧಿಸಿದ ವಿಷಯಗಳ ಕುರಿತು ಪರಿಸರ ಅಧಿಕಾರಿ ಅಜಯಸಿಂಗ್ ಅವರು ಸಮಗ್ರ ಮಾಹಿತಿ ನೀಡಿದರು. ಸಭೆಯಲ್ಲಿ ನೈರುತ್ಯ ರೈಲ್ವೆಯ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಹುಬ್ಬಳ್ಳಿಯ ಮಿನಿವಿಧಾನಸೌಧಕ್ಕೆ ಕಂದಾಯ ಸಚಿವರ ಭೇಟಿ : ಧಾರವಾಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹುಬ್ಬಳ್ಳಿಯ ಮಿನಿವಿಧಾನಸೌಧಕ್ಕೆ ಭೇಟಿ ನೀಡಿ ತಾಲೂಕಿನ ಆಡಳಿತ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದ್ದರು. ಕಲಘಟಗಿ ತಾಲೂಕಿನ ಸರ್ಕಾರಿ ಕಚೇರಿಯ ಭೇಟಿ ಬಳಿಕ ಹುಬ್ಬಳ್ಳಿಯ ಮಿನಿವಿಧಾನಸೌಧಕ್ಕೆ ಆಗಮಿಸಿ ತಾಲೂಕಾಡಳಿತದ ಕಾರ್ಯವೈಖರಿ ಬಗ್ಗೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು.
ಇದನ್ನೂ ಓದಿ: ಹುಬ್ಬಳ್ಳಿಯ ಮಿನಿವಿಧಾನಸೌಧಕ್ಕೆ ಸಚಿವ ಕೃಷ್ಣ ಬೈರೇಗೌಡ ಭೇಟಿ: ಅಧಿಕಾರಿಗಳ ತರಾಟೆ ತೆಗೆದುಕೊಂಡ ಸಚಿವ..