ಹುಬ್ಬಳ್ಳಿ : ಚುನಾವಣಾ ಸಂದರ್ಭ ಇಟ್ಟುಕೊಂಡು ಟೀಕೆ ಟಿಪ್ಪಣೆ ಮಾಡಲಾಗುತ್ತಿದೆ. ದೊಡ್ಡ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ವೈಯಕ್ತಿಕ ವಿಚಾರಗಳನ್ನು ಹಾಗೂ ಜಾತಿಗಳನ್ನು ಇಟ್ಟುಕೊಂಡು ಮಾತನಾಡಬಾರದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಜಾತಿಯ ಬಗ್ಗೆ ಮಾತನಾಡುವುದು ರಾಜಕೀಯ ನಾಯಕರಿಗೆ ಶೋಭೆ ತರುವುದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕೀಳುಮಟ್ಟದ ಭಾಷೆ ಬಳಕೆ ಜಾತಿ ಬಳಕೆ ಮಾಡುವುದು ಸರಿಯಲ್ಲ ಎಂದರು.
ಜಾತಿಯ ವಿಷಯಗಳನ್ನು ಮಾತನಾಡುವುದು ಸರಿಯಲ್ಲ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ರಾಜಕಾರಣದಲ್ಲಿ ವೈಯಕ್ತಿಕ ವಿಷಯ, ಜಾತಿಯ ವಿಷಯಗಳನ್ನು ತೆಗೆದುಕೊಂಡು ಮಾತನಾಡುವುದು ಸರಿಯಲ್ಲ. ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿ ಅವರು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಲೋಕಾಯುಕ್ತಕ್ಕೆ ದೂರು ಕೊಡಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಚೇರಿ ದುರ್ಬಳಕೆ ವಿಚಾರವಾಗಿ ಮಾತನಾಡಿದ ಅವರು, ಟೀಕೆ-ಟಿಪ್ಪಣಿಗಳಿಗೆ ಆಸ್ಪದ ಕೊಡದೇ ದಾಖಲೆಗಳಿದ್ದರೆ ದೂರು ಸಲ್ಲಿಸಿ. ಸುಮ್ಮನೆ ಆರೋಪ ಮಾಡುವ ಮೂಲಕ ರಾಜಕೀಯ ಮಾಡುವುದು ಸರಿಯಲ್ಲ. 40 ಪರ್ಸೆಂಟ್ ಬಗ್ಗೆಯೂ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೊಡಲಿ, ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದನ್ನು ಬಿಡಬೇಕು ಎಂದು ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.
ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗದ ಬಗ್ಗೆ ಕೇಂದ್ರ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಧನಾತ್ಮಕ ವರದಿ ಸಲ್ಲಿಸಿದೆ. ಮುಂದಿನ ಬೋರ್ಡ್ ಮೀಟಿಂಗ್ನಲ್ಲಿ ವರದಿ ಕೈಸೇರಲಿದೆ ಎಂದು ಅವರು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್: ರಾಜ್ಯ ಬಜೆಟ್ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಲಿದೆ. ಈ ಭಾಗದ ಅಭಿವೃದ್ದಿಯ ಬಗ್ಗೆಯೂ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಲಾಗುವುದು. ಅವಶ್ಯಕತೆ ಇರುವ ಅನುದಾನದ ಬಗ್ಗೆ ಉಲ್ಲೇಖ ಮಾಡುವ ಮೂಲಕ ರಾಜ್ಯ ನಾಯಕರ ಜೊತೆಗೆ ಸಮಾಲೋಚನೆ ನಡೆಸಲಾಗುತ್ತದೆ. ಉತ್ತರ ಕರ್ನಾಟಕಕ್ಕೆ ಪೂರಕವಾದ ಬಜೆಟ್ ಇದಾಗಲಿದೆ ಎನ್ನುವಂತಹ ಭರವಸೆ ವ್ಯಕ್ತಪಡಿಸಿದರು.
ಹೆಚ್ಡಿಕೆ ಗೂಢಚಾರಿಕೆ ಶುರು ಮಾಡಿದ್ದಾರಾ (ಬೆಂಗಳೂರು): ಮತ್ತೊಂದು ಕಡೆ ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಾವು ಎಲ್ಲಿ ಊಟ ಮಾಡುತ್ತೇವೆ ಅಂತ ಗೂಢಚಾರಿಕೆ ಶುರು ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ದಯಾನಂದ ಪೈ ಜತೆ ಊಟ ಮಾಡಿದ ಫೋಟೋ ರಿಲೀಸ್ ಮಾಡಿ ತಮ್ಮ ವಿರುದ್ಧ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಎಂಎಸ್ನ ಶೇ90ರಷ್ಟು ಸೀಟ್ ಗಳು ಸಿಇಟಿ ಮೂಲಕವೇ ಭರ್ತಿ ಆಗ್ತಿವೆ. ದಯಾನಂದ ಪೈ ಅವರು ಗೌರವಾನ್ವಿತ ವ್ಯಕ್ತಿ. ಸಾಕಷ್ಟು ಸಾಮಾಜಿಕ ಕೊಡುಗೆ ಕೊಟ್ಟಿರೋರು. ಕುಮಾರಸ್ವಾಮಿ, ದೇವೇಗೌಡ ಅವರಿಗೆ ಪರಿಚಯ ಇರೋರು ದಯಾನಂದ ಪೈ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೆ ಅಗೌರವ ತೋರಿಲ್ಲ: ಹೆಚ್ಡಿಕೆ ಸ್ಪಷ್ಟನೆ