ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದವರು ಈ ಹಿಂದೆ ವಿಧಾನಸೌಧದಲ್ಲಿ ಮಾಡಿರುವ ರಾಡಿಯನ್ನು ನಮ್ಮಿಂದ ತೊಳೆಯಲು ಇನ್ನೂ ಆಗುತ್ತಿಲ್ಲ. ಇನ್ನೂ ಅವರೇ ತೊಳೆಯುತ್ತಾರೆಂಬುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ನಗರದ ನೆಹರೂ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿರು.
ನಾವು ಅಧಿಕಾರಕ್ಕೆ ಬಂದು ಬಿಜೆಪಿಯವರು ವಿಧಾನಸೌಧದಲ್ಲಿ ಮಾಡಿದ ರಾಡಿಯನ್ನು ತೊಳೆದು ಹಾಕುತ್ತೇವೆಂಬ ಹೇಳಿಕೆಗೆ ಟಾಂಗ್ ಕೊಟ್ಟರು. ಕಾಂಗ್ರೆಸ್‌ನವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಅರ್ಕಾವತಿ ಹಗರಣದಲ್ಲಿ ಸರಿಸುಮಾರು 900 ಎಕರೆ ಜಮೀನನ್ನು ಡಿನೋಟಿಫೀಕೇಶನ್ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರು ವಿಧಾನಸೌಧದ ರಾಡಿ ತೊಳೆಯುತ್ತೇವೆಂಬುದು ಹಾಸ್ಯಾಸ್ಪದ. ಏಕೆಂದರೆ ಅವರೇ ಈ ಹಿಂದೆ ದೇಶ ಹಾಗೂ ರಾಜ್ಯದಲ್ಲಿ ರಾಡಿ ಮಾಡಿ ಹೋಗಿದ್ದಾರೆ. ಇದೀಗ ನಮಗೂ ಅವರ ರಾಡಿಯನ್ನು ತೊಳೆಯಲು ಆಗುತ್ತಿಲ್ಲ. ಹೀಗಾಗಿ ಅವರಿಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಕೀಳು ಮಟ್ಟದ ರಾಜಕೀಯ: ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ದೂರಿನ ಕುರಿತು ಶೆಟ್ಟರ್ ಪ್ರತಿಕ್ರಿಯೆ ನೀಡಿದರು. ಇನ್ನೊಂದು ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಗಿಮಿಕ್. ಅದರಲ್ಲಿ ಯಾವುದೇ ಅರ್ಥವಿಲ್ಲ. ಸುಮ್ಮನೆ ದೂರು ಕೊಡೋದು ಪ್ರಚಾರ ತೆಗೆದುಕೊಳ್ಳೋದನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡ ಜಿಲ್ಲಾ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿ, ಜ. 27 ರಂದು ರಾತ್ರಿ ಹುಬ್ಬಳ್ಳಿಗೆ ಬರ್ತಿದ್ದಾರೆ. ಮರುದಿನ ಜ. 28 ರಂದು ಬಿವಿಬಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಧಾರವಾಡದ ವಿವಿ ಕಾರ್ಯಕ್ರಮದಲ್ಲೂ ಪಾಲ್ಗೊಳ್ತಾರೆ. ಕುಂದಗೋಳದಲ್ಲಿ ರೋಡ್ ಶೋ ಮಾಡಲಿದ್ದಾರೆ. ಪಕ್ಷ ಸಂಘಟನೆ ಮತ್ತು ಸರ್ಕಾರದ ವ್ಯವಸ್ಥೆಯಲ್ಲಿ ಸುಧಾರಣೆಯ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಒತ್ತು ಕೊಡುವ ಕೆಲಸವನ್ನು ಅವರು ಮಾಡಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಇದನ್ನೂ ಓದಿ: ಪ್ರಿ - ಪೇಯ್ಡ್ ಆಟೋ ಸೇವೆ ಸ್ಥಗಿತ ಸಾಧ್ಯತೆ: ಹೇಳುವುದು ಒಂದು ಮಾಡುವುದು ಮತ್ತೊಂದು...!