ಹುಬ್ಬಳ್ಳಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಡವರ ಹಸಿವು ನೀಗಿಸುವ ಉದ್ದೇಶದಿಂದ ದಿ. ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಈ ಯೋಜನೆಗೆ ಕೋಟಿ ಹಣ ವ್ಯಯ ಮಾಡಿದ ಅಂದಿನ ಸರ್ಕಾರದ ಅವಧಿ ಮುಗಿಯುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಒಂದೊಂದಾಗಿ ಮುಚ್ಚಿಕೊಳ್ಳುವ ಹಂತಕ್ಕೆ ತಲುಪಿರುವುದು ದುರಾದೃಷ್ಟಕರ.
ಅವಳಿ ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಕೇಶ್ವಾಪುರ ಬೆಂಗೇರಿಯಲ್ಲಿ ಮೂರು ವರ್ಷಗಳ ಹಿಂದೆ ಆರಂಭಿಸಿದ್ದ ಮಾಸ್ಟರ್ ಕಿಚನ್ 10 ತಿಂಗಳಿನಿಂದ ಬಂದ್ ಆಗಿದೆ. ಕೆಲವೇ ದಿನಗಳಲ್ಲಿ ತಲೆಎತ್ತಿ ನಿಂತಿದ್ದ ಈ ಮಾಸ್ಟರ್ ಕಿಚನ್ ಕಟ್ಟಡ ಸದ್ಯ ನಿರುಪಯುಕ್ತವಾಗಿದ್ದು, ಸರ್ಕಾರದ ಹಣ ಹೇಗೆ ವ್ಯಯವಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.
ಓದಿ:ದಾವಣಗೆರೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಹೋಟೆಲ್!
ಬೆಂಗೇರಿಯ ಸಂತೆ ಮಾರುಕಟ್ಟೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಮೈದಾನದಲ್ಲಿ ಅಲ್ಲಿನ ಕೆಲವರ ಭಾರಿ ವಿರೋಧದ ಮಧ್ಯೆ ಕಿಚನ್ ಕಟ್ಟಡ ನಿರ್ಮಿಸಲಾಗಿತ್ತು. ಸರ್ಕಾರದ ಆದೇಶದಂತೆ ಟಿಫನ್ ಹಾಗೂ ಮಧ್ಯಾಹ್ನ , ಸಂಜೆ ಊಟಕ್ಕೆ ಬೇಕಾದ ಆಹಾರವನ್ನು ಈ ಕಿಚನ್‌ನಲ್ಲಿಯೇ ತಯಾರಿಸಿ, ಅವಳಿ ನಗರದಲ್ಲಿರುವ 9 ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಸಲಾಗುತ್ತಿತ್ತು. ಆದ್ರೆ ಇದನ್ನು ನಿಲ್ಲಿಸಿ ಖಾಸಗಿಯಾಗಿ ಆಹಾರ ತಯಾರಿಸಿ ಪೂರೈಸುತ್ತಿರುವುದು ಪಾಲಿಕೆಗೆ ತಿಳಿಯದಿರುವುದು ಅಚ್ಚರಿ ಮೂಡಿಸಿದೆ. ಮುಖ್ಯ ಅಡುಗೆ ಕೇಂದ್ರ ಬಂದ್ ಆಗಿದ್ದರಿಂದ ಊಟ ,ಉಪಹಾರ ಎಲ್ಲಿಂದ ಪೂರೈಸಲಾಗುತ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.