ಹುಬ್ಬಳ್ಳಿ : ಜಿಲ್ಲೆಯ ಹೆಗ್ಗೇರಿ ನಗರ ಆರೋಗ್ಯ ಕೇಂದ್ರದ ನರ್ಸ್ಗಳು ಲಸಿಕೆ ಹಾಕಿಸಿಕೊಳ್ಳಲು ಬಂದ ಮಕ್ಕಳ ಪೋಷಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೆಗ್ಗೇರಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ಗುರುವಾರ ನವಜಾತ ಶಿಶುಗಳಿಂದ ಹಿಡಿದು 10 ವರ್ಷದ ಮಕ್ಕಳಿಗೆ ಓಪಿವಿ, ಬಿಸಿಜಿ, ಪೆಂಟಾ, ಐಪಿವಿ, ವಿಟಮಿನ್ ಲಸಿಕೆಯನ್ನು ಹಾಕಲಾಗುತ್ತದೆ.
ಆದರೆ, ಲಾಕ್ಡೌನ್ ಹಿನ್ನೆಲೆ ಇಷ್ಟು ದಿನ ಮಕ್ಕಳಿಗೆ ಯಾವುದೇ ಲಸಿಕೆ ಹಾಕಿರಲಿಲ್ಲ. ಈಗ ಲಸಿಕೆ ಹಾಕಲಾಗುತ್ತಿದೆ. ತಾಯಂದಿರು ಪುಟ್ಟ ಪುಟ್ಟ ಮಕ್ಕಳನ್ನು ಹೊತ್ತು ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಅವರೆಲ್ಲಾ ನೆಲದ ಮೇಲೆಯೇ ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ.
ಆಸ್ಪತ್ರೆಯಲ್ಲಿ ಸರಿಯಾದ ಆಸನದ ವ್ಯವಸ್ಥೆಯೂ ಇಲ್ಲದೆ ಇತ್ತ ನೆತ್ತಿ ಸುಡುವ ಬಿಸಿಲಿನಲ್ಲಿಯೇ ತಾಯಂದಿರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ತಾಯಿಯೊಬ್ಬರಿಗೆ ನರ್ಸ್ಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ಇವರ ವರ್ತನೆ ಸರಿಪಡಿಸುವ ಜೊತೆಗೆ ಮಕ್ಕಳ ಪೋಷಕರಿಗೆ ಕನಿಷ್ಟ ನೆರಳಿನ ವ್ಯವಸ್ಥೆ ಮಾಡಬೇಕಿದೆ ಎಂದು ಸಾರ್ವಜನಿಕರು ಕೇಳಿಕೊಂಡಿದ್ದಾರೆ.