ಹುಬ್ಬಳ್ಳಿ: ಬೇರೆಯವರ ಕುರಿತಂತೆ ಏಕವಚನದಲ್ಲಿ ಮಾತನಾಡಿದರೆ ಅದು ಸಣ್ಣತನವನ್ನ ತೋರಿಸುತ್ತದೆ. ಕಾಂಗ್ರೆಸ್ ಪಕ್ಷದವರಿಗೆ ಕೀಳು ಮಟ್ಟದಲ್ಲಿ ಮಾತನಾಡುವುದು ರೂಢಿಯಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.
ಸಿದ್ದರಾಮಯ್ಯ ಅವರು ವೀರ್ ಸಾವರ್ಕರ್ ಬಗ್ಗೆ ಸತ್ಯ ಹೇಳಿದ್ದೇನೆ ಎಂಬ ವಿಚಾರವಾಗಿ ನಗರದಲ್ಲಿಂದು ಅಖಿಲ ಭಾರತೀಯ ಗಾಣಿಗ ಸಮಾಜದ ವಾರ್ಷಿಕ ಮಹಾಸಭೆಗೆ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅಪ್ರತಿಮರ ಬಗ್ಗೆ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ನವರಲ್ಲಿ ಈ ರೀತಿ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡುವುದು ರೂಢಿಯಾಗಿದೆ. ಸಿದ್ದರಾಮಯ್ಯನವರೇ, ನೀವು ಇದರ ಪ್ರತಿಫಲ ಅನುಭವಿಸುತ್ತೀರಾ ಎಂದು ಶೆಟ್ಟರ್ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದರು.
ಕೀಳುಮಟ್ಟದಲ್ಲಿ ಮಾತನಾಡುವುದು ಸಿದ್ದರಾಮಯ್ಯ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಾಯಕತ್ವ ಹೆಚ್ಚಾಗುತ್ತೆ ಎಂದು ತಿಳಿದಿದ್ದಾರೆ. ಪ್ರತಿಯೊಬ್ಬರಿಗೂ ಏಕವಚನದಲ್ಲಿ ಮಾತನಾಡುವುದೇ ಅವರ ಸಂಸ್ಕೃತಿಯಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಗ್ಗೆಯೂ ಏಕವಚದಲ್ಲಿಯೇ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ರು.