ಹುಬ್ಬಳ್ಳಿ: ಆಗಸ್ಟ್ 2 ರಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಅಂದು ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಐತಿಹಾಸಿಕ ಸಭೆಯನ್ನು ಅವರು ಹುಬ್ಬಳ್ಳಿ ಖಾಸಗಿ ಹೋಟೆಲ್ನಲ್ಲಿ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆ. 2ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ರಾಹುಲ್ ಆಗಮಿಸಲಿದ್ದು, ಮರುದಿನ ಜಿಲ್ಲೆಯ ಮುರುಘಾಮಠ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭೇಟಿ ನೀಡಲಿದ್ದಾರೆ. ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ದೇಶದಲ್ಲಿ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು, ಹಾಲಿನಿಂದ ಬ್ಯಾಂಕ್ ಚೆಕ್ವರೆಗೆ ಜಿಎಸ್ಟಿ ಬರೆ ಹಾಕುತ್ತಿದೆ. ಅದನ್ನು ಖಂಡಿಸಿ ಕಾಂಗ್ರೆಸ್ನಿಂದ ಬೃಹತ್ ಹೋರಾಟ ಮಾಡಲು ರಾಜಸ್ಥಾನದಲ್ಲಿ ನಡೆದ ಚಿಂತನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ ಪ್ರತಿಕ್ಷೇತ್ರದಿಂದ ಪಾದಯಾತ್ರೆ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಂತೆ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಸೂಚನೆ ಕೊಡಲಾಗಿದೆ. 100ಕ್ಕೂ ಕ್ಷೇತ್ರದಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಪ್ರವೀಣ ಹತ್ಯೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಪದೇ ಪದೆ ಇಂತಹ ಹತ್ಯೆಗಳು ನಡೆಯುತ್ತಿವೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಅಂತಹ ಹತ್ಯೆಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ತನಿಖೆ ವಿಚಾರದಲ್ಲಿ ನಾವು ಭಾಗಿಯಾಗುವುದಿಲ್ಲ. ಸಾವಿಗೆ ನ್ಯಾಯ ಕೊಡಿಸುವ ವಿಚಾರ ಸರ್ಕಾರಕ್ಕೆ ಇದ್ದರೆ ನ್ಯಾಯ ಒದಗಿಸಲಿ ಎಂದರು.
ಕೇಂದ್ರ ಸರ್ಕಾರದಿಂದ ರಾಷ್ಟ್ರಧ್ವಜ ಸಂಹಿತೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಸ್ವತಂತ್ರದ ಬಗ್ಗೆ ಗೌರವವಿಲ್ಲ. ರಾಷ್ಟ್ರಧ್ವಜದ ಇತಿಹಾಸವು ಕೂಡಾ ಗೊತ್ತಿರದ ಬಿಜೆಪಿಗರು ರಾಷ್ಟ್ರಧ್ವಜದ ಕುರಿತು ಮಾತನಾಡುತ್ತಾರೆಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಪ್ರತಿಯೊಬ್ಬ ನಾಯಕ, ಕಾರ್ಯಕರ್ತರು ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪಕ್ಷದ ಕೆಲ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು.
ಸಾಂತ್ವನ ಹೇಳುವ ಕೆಲಸ ಮಾಡಲಿದ್ದೇನೆ: ದಕ್ಷಿಣ ಕನ್ನಡದಲ್ಲಿ ಪ್ರವೀಣ ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರ ರಾಜೀನಾಮೆ ಪರ್ವ ಆರಂಭವಾಗಿದ್ದು, ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರದ ಮೇಲೆ ನಂಬಿಕೆಯಿತ್ತು. ಆದರೆ, ಸರ್ಕಾರ ಕಾರ್ಯಕರ್ತರ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈಗಾಗಲೇ ರಾಜೀನಾಮೆ ಕೊಟ್ಟಿರುವ ಬಿಜೆಪಿ ಕಾರ್ಯಕರ್ತರ ನೋವು ಏನೆಂಬುದು ನನಗೆ ಗೊತ್ತಿದೆ. ಅವರ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡರೆ ನಮ್ಮ ಅಭ್ಯಂತರವಿಲ್ಲ. ಹತ್ಯೆಗೆ ಒಳಗಾಗಿ ಅಸುನೀಗಿದ ಮೂವರ ಕುಟಂಬಸ್ಥರ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.
ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 15 ಮಧ್ಯಾಹ್ನ 2 ಗಂಟೆ ನಂತರ ಬೆಂಗಳೂರಿನಲ್ಲಿ 75 ಸಾವಿರಕ್ಕೂ ಅಧಿಕ ಜನರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜುವರೆಗೆ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಹೊರತುಪಡಿಸಿ ಇನ್ನಿತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿ ಎಂದು ಡಿಕೆಶಿ ಕರೆ ಕೊಟ್ಟರು.
ಸಿದ್ದರಾಮೋತ್ಸವದ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ: ನಮ್ಮ ಮಾಜಿ ಸಿಎಂ ಅವರ 75 ನೇ ಜನ್ಮದಿನಾಚರಣೆ ಇದೆ. ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ನಾವೆಲ್ಲ ಹೋಗುತ್ತೇವೆ. ಅದನ್ನ ನೀವೇನಾದ್ರೂ ಬರೆದುಕೊಳ್ಳಿ. ನಾನೇನೂ ಹೇಳಲ್ಲ. ನಮ್ಮ ಮಾಜಿ ಸಿಎಂ ಅವರ 75 ನೇ ವರ್ಷದ ಜನ್ಮದಿನ ಅಷ್ಟೇ ಎಂದರು.
ಓದಿ: ಅಧಿಕಾರ ನಾಡಿನ ಶ್ರೇಯಸ್ಸಿಗಾಗಿ, ಅದು ವ್ಯಕ್ತಿಗತ ಆಗಿರಬಾರದು: ಸಚಿವ ಅಶ್ವತ್ಥನಾರಾಯಣ್