ಹುಬ್ಬಳ್ಳಿ: ಗೋವಾದಿಂದ ಅಕ್ರಮವಾಗಿ ಮದ್ಯ ತೆಗೆದುಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಗೋಕುಲರಸ್ತೆ ಠಾಣೆಯ ಪೊಲೀಸರು ಬಂಧಿಸಿ, 69.04 ಲೀಟರ್ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹಳೇ ಹುಬ್ಬಳ್ಳಿ ಬ್ಯಾಳಿ ಓಣಿಯ ಕೇಶವ ಪಿ. ಅಥಣಿ ಬಂಧಿತನಾಗಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ಗೋಕುಲ ರಸ್ತೆ ಪೊಲೀಸ್ ಠಾಣೆಯ ಮುಖ್ಯ ಪೇದೆ ಎಂ.ಎಂ.ಗಡೇಣ್ಣ ನ. 3ರಂದು ಸಂಜೆ ಕರ್ತವ್ಯದಲ್ಲಿದ್ದಾಗ ಅಕ್ಷಯ ಕಾಲೋನಿ ವೃತ್ತದಲ್ಲಿ ವೇಗವಾಗಿ ಕಾರು ಹೋಗುತ್ತಿದ್ದ ವೇಳೆ ಅನುಮಾನಗೊಂಡು ಹಿಂಬಾಲಿಸಿದಾಗ ಕಾರಿನಲ್ಲಿದ್ದ ಇಬ್ಬರು ವಾಹನವನ್ನು ಲಕ್ಷ್ಮೀ ನಾರಾಯಣ ನಗರದ ಆರೋಢ ಹೇರಿಟೇಜ್ ಅಪಾರ್ಟ್ಮೆಂಟ್ನ ಪಾರ್ಕಿಂಗ್ನಲ್ಲಿ ಬಿಟ್ಟು ಪರಾರಿಯಾಗಿದ್ದರು.
ಕಾರು ಪರಿಶೀಲಿಸಿದಾಗ ಅದರ ಹಿಂಬದಿ ಸೀಟಿನಲ್ಲಿ ವಿವಿಧ ಕಂಪನಿಗಳ ಮದ್ಯದ ಬಾಟಲಿಗಳನ್ನು ಮುಚ್ಚಿಡಲಾಗಿತ್ತು. ನಂತರ ಪೊಲೀಸರು ಕೇಶವನನ್ನು ಪತ್ತೆ ಮಾಡಿ ವಿಚಾರಿಸಿದಾಗ, ಗೋವಾದಿಂದ ಮದ್ಯದ ಬಾಟಲಿಗಳನ್ನು ಖರೀದಿಸಿ ಅವುಗಳನ್ನು ನಗರದಲ್ಲಿ ಮಾರಾಟ ಮಾಡುವುದಾಗಿ ಬಾಯಿಬಿಟ್ಟಿದ್ದಾನೆ. ಇನ್ನು ಈ ಸಂಬಂಧ ಗೋಕುಲ ರಸ್ತೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.