ಹುಬ್ಬಳ್ಳಿ: ಪ್ರತಿಭೆ, ಸಾಮರ್ಥ್ಯವಿದ್ದರೂ ಅದೆಷ್ಟೋ ಪ್ರತಿಭಾ ಕುಸುಮಗಳ ಸಾಧನೆಗೆ ಆರ್ಥಿಕ ಸಂಕಷ್ಟ ಅಡೆತಡೆ ಉಂಟು ಮಾಡುತ್ತದೆ. ಇದಕ್ಕೆ ಅನೇಕ ನಿದರ್ಶನಗಳಿವೆ. ಜಿಲ್ಲೆಯ ಅಂಜನಾ ಶೆಣೈ ಅವರದ್ದು ಕೂಡಾ ಅದೇ ಕಥೆ.
ಈಕೆ ಮೂಲತಃ ಹುಬ್ಬಳ್ಳಿಯ ದೇಶಪಾಂಡೆ ನಗರದ ನಿವಾಸಿ. ಹುಬ್ಬಳ್ಳಿ ಲಯನ್ಸ್ನಲ್ಲಿ ಎಸ್ಎಸ್ಎಲ್ಸಿ ಮುಗಿಸಿದ್ದು, ಅಥ್ಲೆಟಿಕ್ಸ್ನಲ್ಲಿ ಭರವಸೆ ಮೂಡಿಸಿದ ಸ್ಪರ್ಧಿ. ಕಳೆದ ಏಳು ವರ್ಷಗಳಿಂದ ಓಟದ ಸ್ಪರ್ಧೆಗಳಲ್ಲಿ ತೊಡಗಿಕೊಂಡಿರುವ ಅಂಜನಾ, ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
2019ರ ಜೂನ್ನಲ್ಲಿ ಗೋವಾದಲ್ಲಿ ನಡೆದ ಯುನೈಟೆಡ್ ನ್ಯಾಷನಲ್ ಗೇಮ್ಸ್ನಲ್ಲಿ ಭಾಗವಹಿಸಿದ ಈಕೆ, 800 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ದುಬೈನಲ್ಲಿ ನವಂಬರ್ 7 ರಿಂದ 11 ರವರೆಗೆ ಆಯೋಜಿಸಿದ್ದ 6ನೇ ಯುನೈಟೆಡ್ ಇಂಟರ್ನ್ಯಾಷನಲ್ ಗೇಮ್ಸ್ನಲ್ಲಿ ಪಾಲ್ಗೊಂಡು 1,500 ಮೀಟರ್ ಓಟದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಈಕೆಯ ಸಾಧನೆ ಪರಿಗಣಿಸಿ ಸ್ಥಳೀಯ ಮಟ್ಟದಲ್ಲಿ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿವೆ.
ಓಟಗಳ ಸ್ಪರ್ಧೆ ಮಾತ್ರವಲ್ಲ, ಬ್ಯಾಡ್ಮಿಂಟನ್, ಯೋಗ ಹೀಗೆ ಅನೇಕ ವಿಭಾಗಗಳಲ್ಲಿ ಅತೀವ ಆಸಕ್ತಿ ಹೊಂದಿರುವ ಅಂಜನಾಳ ಮತ್ತಷ್ಟು ಸಾಧನೆಗೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಈಕೆಯ ತಂದೆಗೆ ಹೇಳಿಕೊಳ್ಳುವಂಥ ಆದಾಯ ತಂದುಕೊಡುವ ಕೆಲಸವಿಲ್ಲ. ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಅಲ್ಪಸ್ವಲ್ಪ ಹಣ ಕೂಡಿಟ್ಟು ಮಗಳ ಕ್ರೀಡಾಸಕ್ತಿಗೆ ಪ್ರೋತ್ಸಾಹ ಮಾಡುತ್ತಿದ್ದಾರೆ. ಆದ್ರೆ, ಮಗಳ ಮತ್ತಷ್ಟು ಸಾಧನೆಗೆ ಹಣಕಾಸಿನ ಸಮಸ್ಯೆ ಅಡ್ಡಿಯಾಗಿದೆ. ಹಾಗಾಗಿ ಬಡ ಕ್ರೀಡಾಪಟುವಿಗೆ ದಾನಿಗಳು ಮುಂದೆ ಬಂದು ಸಹಾಯ ಮಾಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಇವರಿಗೆ ಆರ್ಥಿಕ ನೆರವು ನೀಡಲು ಇಚ್ಛಿಸುವವರು ರವಿ ಶೆಣೈ (ಬಾಲಕಿ ತಂದೆ) ಮೊಬೈಲ್ ಸಂಖ್ಯೆ- 9343869087) ಗೆ ಕರೆ ಮಾಡಬಹುದಾಗಿದೆ.