ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರ ಹುಬ್ಬಳ್ಳಿ-ಧಾರವಾಡ ಅವಳಿ ನಗರ. ಸುತ್ತಮುತ್ತಲ ಹಲವು ಜಿಲ್ಲೆಗಳ ಜನರು ಪ್ರಮುಖವಾಗಿ ಹುಬ್ಬಳ್ಳಿಯನ್ನೇ ಕೇಂದ್ರವಾಗಿಟ್ಟುಕೊಂಡು ವ್ಯಾಪಾರ - ವಹಿವಾಟು ನಡೆಸುತ್ತಾರೆ. ಆದ್ರೆ ಚೋಟಾ ಮುಂಬೈ ಅಂತಲೇ ಕರೆಯಲ್ಪಡುವ ವಾಣಿಜ್ಯ ನಗರಿ ಹುಬ್ಬಳ್ಳಿಯ ರಸ್ತೆಗಳ ಪರಿಸ್ಥಿತಿ ಮಾತ್ರ ಅಯೋಮಯವಾಗಿದೆ.
ಯಾರೇ ಶಾಸಕರಾದರೂ, ಸಚಿವರಾದರೂ ನಗರದ ಹದೆಗೆಟ್ಟ ರಸ್ತೆಗಳ ಪರಿಸ್ಥಿತಿ ಮಾತ್ರ ಸುಧಾರಣೆ ಕಾಣುತ್ತಿಲ್ಲ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ಹುಬ್ಬಳ್ಳಿ ನಗರ ಆಯ್ಕೆಯಾದಾಗ ಇಲ್ಲಿನ ನಿವಾಸಿಗಳು ಖುಷಿ ಪಟ್ಟಿದ್ದರು. ಇನ್ನಾದರೂ ನಗರದ ರಸ್ತೆಗಳು ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಸ್ಮಾರ್ಟ್ ಸಿಟಿ ಯೋಜನೆಯಿಂದ ಜನರಿಗೆ ಉಪಯೋಗವಾಗುವುದಕ್ಕಿಂತ, ಸಮಸ್ಯೆಗಳೇ ಹೆಚ್ಚಾಗಿವೆ.
ಹಳ್ಳ ಹಿಡಿದ ಸ್ಮಾರ್ಟ್ ಸಿಟಿ ಕಾಮಗಾರಿ
ಸ್ಮಾರ್ಟ್ ಸಿಟಿ ಯೋಜನೆಯಿಂದ ನಗರ ಸ್ಮಾರ್ಟ್ ಆಗೋದು ಬಿಟ್ಟು, ದುಃಸ್ಥಿತಿಗೆ ತಲುಪಿದೆ. ಅಭಿವೃದ್ಧಿಯ ಹೆಸರಿನಲ್ಲಿ ಇದ್ದ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಳಿಸುವಿಕೆ ವಿಳಂಬ ಆಗ್ತಿದೆ. ಇದಕ್ಕೆ, ಸ್ಮಾರ್ಟ್ ಸಿಟಿ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿ ಮತ್ತು ಪಾಲಿಕೆ ನಡುವಿನ ಸಮನ್ವಯತೆಯ ಕೊರತೆಯೇ ಕಾರಣ ಎಂದು ಹೇಳಲಾಗ್ತಿದೆ. ಪಾಲಿಕೆ ಮತ್ತು ಗುತ್ತಿಗೆದಾರರ ತಿಕ್ಕಾಟದಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.
ಸಿಎಂ ಬದಲಾದರೂ ಬದಲಾಗದ ರಸ್ತೆ..
ಮಾಜಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ನಗರಾಭಿವೃದ್ದಿ ಸಚಿವರಾಗಿದ್ದ ಭೈರತಿ ಬಸವರಾಜ್ ಅವರಿಗೆ ಮತ್ತೆ ಅದೇ ಖಾತೆ ದೊರೆತಿದೆ. ಈ ಹಿಂದಿನ ಸಂಪುಟದಲ್ಲಿದ್ದಾಗ ನಗರಕ್ಕೆ ಆಗಮಿಸಿದ್ದ ಬೈರತಿ, ಇನ್ನೆರಡು ತಿಂಗಳಲ್ಲಿ ಸ್ಮಾರ್ಟ್ ಸಿಟಿಯ ಹೆಚ್ಚಿನ ಕಾಮಗಾರಿಗಳನ್ನು ಮುಗಿಸಿ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದ್ದರು.
ಸಚಿವರು ಭರವಸೆ ನೀಡಿ ಮೂರು ತಿಂಗಳು ಕಳೆಯಿತು. ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಿ ಹೊಸ ಸಂಪುಟ ರಚನೆಯೂ ಆಯಿತು. ಆದರೆ, ನಗರದ ರಸ್ತೆಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇದೀಗ ನೂತನ ಸಂಪುಟದಲ್ಲಿ ಜಿಲ್ಲೆಯ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ನೂತನ ಸಚಿವರ ಬಳಿ ರಸ್ತೆಗಳ ದುಃಸ್ಥಿತಿಯ ಬಗ್ಗೆ ಕೇಳಿದಾಗ, ಕೆಲವೊಂದು ಕಡೆಗಳಲ್ಲಿ ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಬಂದಿಲ್ಲ. ಹಾಗಾಗಿ, ಸಮಸ್ಯೆಯಾಗಿದೆ. ಸಮಸ್ಯೆ ಸರಿಪಡಿಸಿ ಕಾಮಗಾರಿಗಳಿಗೆ ವೇಗ ನೀಡುತ್ತೇವೆ ಎಂದಿದ್ದಾರೆ.
ಎಲ್ಲೆಲ್ಲಿ ರಸ್ತೆಗಳು ಹದಗೆಟ್ಟಿವೆ..
ಹುಬ್ಬಳ್ಳಿ ನಗರದ ಹೃದಯ ಭಾಗ ಹಾಗೂ ಮಾರುಕಟ್ಟೆ ಪ್ರದೇಶಗಳಾದ ಕೊಪ್ಪಿಕರ್ ರಸ್ತೆ, ಸ್ಟೇಷನ್ ರಸ್ತೆ, ಗಣೇಶ ಪೇಟೆ, ಷಾ ಬಜಾರ್ ರಸ್ತೆಗಳ ಪರಿಸ್ಥಿತಿ ತೀರಾ ಹದೆಗೆಟ್ಟಿದೆ. ಜನ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಇನ್ನೊಂದೆಡೆ, ನಗರದ ಚೆನ್ನಮ್ಮ ವೃತ್ತದ ಬಳಿ ನಿರ್ಮಾಣಗೊಳುತ್ತಿರುವ ಬಹು ಅಂತಸ್ಥಿನ ಕಾರು ಪಾರ್ಕಿಂಗ್ ಕಟ್ಟಡ ಕಾಮಗಾರಿಯಿಂದ ಕೋರ್ಟ್ ಸರ್ಕಲ್ ರಸ್ತೆಯನ್ನೇ ಬಂದ್ ಮಾಡಲಾಗಿದೆ. ಮಲ್ಟಿ ಕಾರು ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡುತ್ತೇವೆ ಎಂದು ಹುಬ್ಬಳ್ಳಿ -ಗದಗದ ಪ್ರಮುಖ ರಸ್ತೆಯನ್ನು ಮುಚ್ಚಿದ್ದಾರೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ವಾಹನಗಳು, ಚೆನ್ನಮ್ಮ ವೃತ್ತದ ಮೂಲಕ ಹೋಗಬೇಕಾಗಿದೆ. ಇದರಿಂದ ಚೆನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ನೂತನ ಸಚಿವರ ಮೇಲೆ ನಿರೀಕ್ಷೆ
ಪ್ರಸ್ತುತ ಜಿಲ್ಲೆಯಲ್ಲಿ ಓರ್ವ ಮಾಜಿ ಸಿಎಂ, ಓರ್ವ ಕೇಂದ್ರ ಸಚಿವ ಹಾಗೂ ನೂತನವಾಗಿ ಆಯ್ಕೆಯಾದ ಓರ್ವ ಸಂಪುಟ ಸಚಿವರಿದ್ದಾರೆ. ಈ ಹಿಂದೆ ಯಾವುದೇ ಜನಪ್ರತಿನಿಧಿಗಳು ನೀಡಿದ ಭರವಸೆ ಈಡೇರಿಲ್ಲ. ಈಗ ನೂತನವಾಗಿ ಆಯ್ಕೆಯಾದ ಸಚಿವರಾದರೂ ನಗರದ ರಸ್ತೆಗಳ ಬಗ್ಗೆ ಗಮನಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.