ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ - ಧಾರವಾಡ ಕಮೀಷನರೇಟ್ಗೆ ಕಾವಲುಗಾರನಂತೆ ದಕ್ಷ ಪೊಲೀಸ್ ಅಧಿಕಾರಿಯಾಗಿ ಲಾಬುರಾಮ್ ಅವರು ಆಗಮಿಸಿದ್ದಾರೆ. ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುವ ನಿಟ್ಟಿನಲ್ಲಿ ಇವರ ಮುಂದೆ ಹತ್ತು ಹಲವು ಸವಾಲುಗಳಿವೆ.
ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಜವಾಬ್ದಾರಿ ಪೊಲೀಸ್ ಆಯುಕ್ತ ಲಾಬುರಾಮ್ ಅವರಿಗೆ ಇದೆ. ಅವರು ಬೆಂಗಳೂರಿನಲ್ಲಿ ರೌಡಿಸಂ ಮಟ್ಟ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವು ಪ್ರಮುಖ ಸರಗಳ್ಳತನ, ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದ ದಕ್ಷ ಅಧಿಕಾರಿ ಅವಳಿನಗರಕ್ಕೆ ಆಗಮಿಸಿದ್ದು, ವಾಣಿಜ್ಯ ನಗರಿ ಜನರು ಇವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ನಗರದಲ್ಲಿ ಅವ್ಯಾಹತವಾಗಿರುವ ಕ್ರಿಕೆಟ್ ಬೆಟ್ಟಿಂಗ್ ತಡೆಗಟ್ಟುವ ಬಹುದೊಡ್ಡ ಸವಾಲು ಪೊಲೀಸ್ ಆಯುಕ್ತರ ಮೇಲಿದೆ. ಮುಂಬೈ, ದುಬೈನಿಂದ ಲೇನ್ ಮಷಿನ್ ತಂದು ಬೆಟ್ಟಿಂಗ್ ಆಡುವ ಜಾಲ ಸಕ್ರಿಯವಾಗಿದ್ದು, ಹುಬ್ಬಳ್ಳಿ ಮೂಲಕ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೋಟ್ಯಂತರ ರೂ. ಬೆಟ್ಟಿಂಗ್ ದಂಧೆ ನಡೆಸುವ ಭಾರೀ ಕುಳಗಳು ಇಲ್ಲಿವೆ. ಮಟ್ಕಾ, ಇಸ್ಪೀಟ್, ಜೂಜಾಟ , ಮಸಾಜ್ ಪಾರ್ಲರ್, ಲಾಡ್ಜ್ ಹೆಸರಲ್ಲಿ ವೇಶ್ಯಾವಾಟಿಕೆ, ಮನೆಗಳ್ಳತನ, ಬೈಕ್ ಕಳ್ಳತನ, ಅಕ್ರಮ ಸಾರಾಯಿ ಮಾರಾಟ, ಹಫ್ತಾ ವಸೂಲಿ ಮತ್ತಿತರ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಹೊಣೆ ನೂತನ ಪೊಲೀಸ್ ಆಯುಕ್ತರ ಮೇಲಿದೆ.
ಪುಡಿ ರೌಡಿಗಳು ಚಾಕು- ಚೂರಿ ಹಿಡಿದು ಕ್ಷುಲ್ಲಕ ಕಾರಣಕ್ಕೆ ರಸ್ತೆ ಮಧ್ಯೆ ಹೊಡೆದಾಡಿಕೊಂಡು ಹತ್ಯೆಗೈದ ಹಲವು ಪ್ರಕರಣಗಳು ಇತ್ತೀಚೆಗೆ ನಗರ ನಡೆದಿವೆ. ಹಾಗಾಗಿ, ರೌಡಿಗಳು ಬಾಲ ಬಿಚ್ಚದಂತೆ ಆಗಾಗ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆಯಿದೆ.