ಹುಬ್ಬಳ್ಳಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕಾಗದ ರಹಿತ ಕೇಂದ್ರ ಬಜೆಟ್ ಐತಿಹಾಸಿಕವಾಗಲಿದೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಕೋವಿಡ್-19 ಪ್ರೋಟೋಕಾಲ್ ಕಾರಣದಿಂದಾಗಿ ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ.
ಬಜೆಟ್ ರಚನೆಯಲ್ಲಿ ಜನರ ಭಾಗವಹಿಸುವಿಕೆ ಮತ್ತು ಪ್ರಜಾಪ್ರಭುತ್ವದ ಅಡಿಯಲ್ಲಿ ರಚಿಸಲು ಹಣಕಾಸು ಸಚಿವಾಲಯವು ಆನ್‌ಲೈನ್ ಪೋರ್ಟಲ್ ಮೂಲಕ 2020ರ ನವೆಂಬರ್‌ನಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಹಲವಾರು ನಿರೀಕ್ಷೆಗಳೊಂದಿಗೆ ಐತಿಹಾಸಿಕ ಬಜೆಟ್ ಆಗಲಿದೆ.
ಕೊರೊನಾ ಸೋಂಕಿನಿಂದ ಲಕ್ಷಾಂತರ ಜೀವಗಳು ಮತ್ತು ಜೀವನೋಪಾಯಗಳು ಕಳೆದುಹೋಗಿರುವ ಈ ಸಮಯದಲ್ಲಿ ಸರ್ಕಾರವು ಹೆಚ್ಚಿನ ಕಡಿತ ಮತ್ತು ವಿನಾಯಿತಿಗಳ ರೂಪದಲ್ಲಿ ಪರಿಹಾರ ಕೊಡುತ್ತದೆ ಎಂಬುದು ಸಾಮಾನ್ಯ ಜನರ ಆಶಯವಾಗಿದೆ. ವರ್ಷದಿಂದ ವರ್ಷಕ್ಕೆ ತೆರಿಗೆ ವಿನಾಯಿತಿ ಸಾಮಾನ್ಯ ಜನರ ಆಶಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಹಣಕಾಸು ಮಂತ್ರಿಗಳು 2020ರ ಬಜೆಟ್‌ನಲ್ಲಿ ಹೊಸ ವೈಯಕ್ತಿಕ ಆದಾಯ ತೆರಿಗೆ ನಿಯಮವನ್ನು ಪರಿಚಯಿಸಿದ್ದರು. ವೈಯಕ್ತಿಕ ತೆರಿಗೆದಾರರಿಗೆ ಹಳೆಯ ನಿಯಮದೊಂದಿಗೆ ಉಳಿಯಲು ಅಥವಾ ಎಲ್ಲಾ ಕಡಿತ ಮತ್ತು ವಿನಾಯಿತಿಗಳನ್ನು ಮೊದಲೇ ತಿಳಿಸುವ ಮೂಲಕ ಹೊಸ ಆಡಳಿತಕ್ಕೆ ಬದಲಾಯಿಸುವ ಆಯ್ಕೆಯನ್ನು ನೀಡಿತ್ತು. ಎರಡರ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿ 2,50,000 ರೂ. ಮತ್ತು ಇದನ್ನು 5 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ತೆರಿಗೆದಾರರು ಆಶಿಸಿದ್ದಾರೆ.
ಪಿಪಿಎಫ್, ಇಎಲ್‌ಎಸ್‌ಎಸ್, ಸುಕನ್ಯಾ ಸಮೃದ್ಧಿ ಯೋಜನೆ, ಎನ್‌ಪಿಎಸ್, ಐದು ವರ್ಷದ ತೆರಿಗೆ ಉಳಿತಾಯ ಠೇವಣಿ ಮುಂತಾದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ವ್ಯಕ್ತಿಗಳು ಸೆಕ್ಷನ್ 80 ಸಿ ಅಡಿಯಲ್ಲಿ ಗರಿಷ್ಠ 1.50 ಲಕ್ಷ ರೂ.ಗಳ ಕಡಿತ ಮೇಲೆ ಕ್ಲೈಮ್ ಪಡೆಯಬಹುದು. ಈ ಕಡಿತವು ಜೀವ ವಿಮಾ ಪ್ರೀಮಿಯಂ ಪಾವತಿ, ಗೃಹ ಸಾಲಗಳ ಪ್ರಿನ್ಸಿಪಲ್ ಅಮೌಂಟ್ ಮತ್ತು ಬೋಧನಾ ಶುಲ್ಕ ಒಳಗೊಂಡಿರುತ್ತದೆ.
1.50 ಲಕ್ಷ ರೂ.ಗಳ ಸೀಲಿಂಗ್ಅನ್ನು ಕೊನೆಯದಾಗಿ 2014-15ನೇ ಹಣಕಾಸು ವರ್ಷದಲ್ಲಿ ಪರಿಷ್ಕರಿಸಲಾಯಿತು ಮತ್ತು ಮೇಲ್ಮುಖವಾದ ಪರಿಷ್ಕರಣೆ ಮಾಡಿ ಬಹಳ ಸಮಯ ಕಳೆದಿದೆ. ಇದು ಸಾಮಾನ್ಯ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಈ ಮಿತಿಯನ್ನು ಕನಿಷ್ಠ 2.50 ಲಕ್ಷ ರೂ.ಗೆ ಏರಿಸಬಹುದು ಎಂಬುದು ಸಾಮಾನ್ಯ ಜನರ ಆಶಯವಾಗಿದೆ.
ಮೊದಲ ಬಾರಿಗೆ ಲಕ್ಷಾಂತರ ಚಿಲ್ಲರೆ ಹೂಡಿಕೆದಾರರು ಷೇರು ಮಾರುಕಟ್ಟೆಗೆ ಸೇರುತ್ತಿರುವುದರಿಂದ ಈಕ್ವಿಟಿಯಲ್ಲಿನ ದೀರ್ಘಾವಧಿಯ ಬಂಡವಾಳದ ಲಾಭದ ಮೇಲಿನ ತೆರಿಗೆಯನ್ನು 10%ರಿಂದ 5%ಕ್ಕೆ ಇಳಿಸುವ ನಿರೀಕ್ಷೆಯೂ ತೆರಿಗೆದಾರರಿಗಿದೆ. ಪರ್ಯಾಯವಾಗಿ ದೀರ್ಘಾವಧಿಯ ಲಾಭದ ಮೇಲಿನ ವಿನಾಯಿತಿಯನ್ನು ಈಗಿರುವ 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬ ನಿರೀಕ್ಷೆ ಇದೆ.
ಓದಿ: ವಿಧಾನಸಭೆ ಕಲಾಪ: ಅಗಲಿದ ಗಣ್ಯರಿಗೆ ಸಂತಾಪ ಸೂಚನೆ
ಕೈಗಾರಿಕೆಗಳು, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಮೇಲೆ ವಿನಾ ಕಾರಣ ಹಾಕುವ ಟ್ಯಾಕ್ಸ್ಗಳಿಗೆ ಕಡಿವಾಣ ಹಾಕಬೇಕು. ಜನಸಾಮಾನ್ಯರ ಪರ ಹಾಗೂ ಉದ್ಯೋಗ ಸೃಷ್ಟಿಯ ಮುನ್ನೋಟ ಇಟ್ಟುಕೊಂಡ ಬಜೆಟ್ ಮಂಡನೆಯಾಗಬೇಕು ಎಂಬ ಆಶಯವನ್ನು ಹೊಂದಲಾಗಿದೆ.