ಹುಬ್ಬಳ್ಳಿ: ನಿರುದ್ಯೋಗ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಆದರೆ, ಅದನ್ನೇ ಸವಾಲಾಗಿ ತೆಗೆದುಕೊಂಡ ಯುವಕರ ತಂಡವೊಂದು ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ.
ಹೌದು, ನಗರದ ಯುವಕರ ತಂಡಯೊಂದು 'ಮಹಾನಾಯಕ' ಹೆಸರಿನಲ್ಲಿ ಮೊಬೈಲ್ ಕ್ಯಾಂಟೀನ್‌ಗಳನ್ನು ಆರಂಭಿಸಿ ಸ್ನೇಹಿತರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ.
ಮೊಬೈಲ್ ಕ್ಯಾಂಟೀನ್ ನಿರ್ಮಿಸಿ ಉದ್ಯೋಗ ನೀಡುತ್ತಿರುವವರ ಹೆಸರು ನಿರಂಜನ ಹೊಳೆಪ್ಪನವರ ಹಾಗೂ ಸಂಜು ತಿರಕಣ್ಣವರ. ಕೇವಲ 10 ಹಾಗೂ 8 ನೇ ತರಗತಿ ಓದಿರುವ ಯುವಕರಿಬ್ಬರ ಕನಸು ಹಾಗೂ ಉದ್ದೇಶ ದೊಡ್ಡದಿದೆ. ಕೆಲಸವಿಲ್ಲದೇ ಅಲೆಯುತ್ತಿದ್ದ ಸ್ನೇಹಿತರಿಗೆ ನೆರವಾಗಬೇಕು ಎನ್ನುವ ಕಾರಣದಿಂದ ಎರಡು ತಿಂಗಳ ನಿರಂತರ ಪ್ರಯತ್ನದಿಂದ ಇವರ 'ಮಹಾನಾಯಕ' ಮೊಬೈಲ್ ಕ್ಯಾಂಟೀನ್ ಕನಸು ಸಾಕಾರಗೊಂಡಿದೆ.
ನಗರದ ಕಿಮ್ಸ್ ಹಿಂಭಾಗ, ಕೋರ್ಟ್ ವೃತ್ತ, ಹೆಚ್ಡಿಎಫ್ಸಿ ಬ್ಯಾಂಕ್ ಹತ್ತಿರ, ಹೊಸ ಕೋರ್ಟ್ ಬಳಿ ಆರಂಭವಾಗಿರುವ 5 ಕ್ಯಾಂಟೀನ್‌ಗಳಲ್ಲಿ ಸುಮಾರು 15 ಯುವಕ ಹಾಗೂ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಕನಿಷ್ಠ 20 ಕ್ಯಾಂಟೀನ್ ಆರಂಭಿಸಿ ಸುಮಾರು 50 ಜನರಿಗಾದರೂ ಉದ್ಯೋಗ ಕಲ್ಪಿಸಬೇಕು ಎನ್ನುವ ಉದ್ದೇಶ ಇವರದ್ದಾಗಿದೆ. ಕಳೆದ 10 ದಿನಗಳಿಂದ ಕ್ಯಾಂಟೀನ್ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೇವಲ 15ರೂ. ಗೆ ಪಲಾವ್ ಜೊತೆ ಟೀ ನೀಡುತ್ತಿದ್ದಾರೆ. ದುಡಿಯುವ ಜನರಿಗೆ ಕೆಲಸ, ಹಸಿದವರಿಗೆ ಕಡಿಮೆ ಹಣದಲ್ಲಿ ಹೊಟ್ಟೆ ತುಂಬ ಊಟ ನೀಡಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ತಮ್ಮ ಕ್ಯಾಂಟೀನ್ನಲ್ಲಿ ಉಳಿದ ಪಲಾವ್ ಅನ್ನು ಅನಾಥಾಶ್ರಮಕ್ಕೆ ನೀಡಿ ಮಾನವೀಯತೆ ಕೂಡಾ ಮೆರೆದಿದ್ದಾರೆ. ಜನರ ಬೇಡಿಕೆ ನೋಡಿಕೊಂಡು ಇನ್ನಿತರ, ಒಂದೆರಡು ಪದಾರ್ಥಗಳನ್ನು ಹೆಚ್ಚಿಸಬೇಕು ಎನ್ನುವ ಗುರಿ ಹೊಂದಿದ್ದಾರೆ.
ಓದಿ: ನಿಮಗೆ ತಾಕತ್ ಇದ್ರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಿ: ಡಿಕೆಶಿಗೆ ಈಶ್ವರಪ್ಪ ಸವಾಲ್
ಒಟ್ಟಿನಲ್ಲಿ, ಮೊಬೈಲ್ ಕ್ಯಾಂಟೀನ್ಗಳ ಜೊತೆಗೆ ಮಹಾನಾಯಕರ ಹೆಸರಲ್ಲಿ ದೊಡ್ಡ ಹೋಟೆಲ್ ಆರಂಭಿಸಿ, ಕಡಿಮೆ ಬೆಲೆಯಲ್ಲಿ ಬಡವರಿಗೆ ಊಟ ಉಪಾಹಾರ ನೀಡಬೇಕೆನ್ನುವ ಗುರಿ ಹೊಂದಿರುವ ಇವರ ಕಾರ್ಯ ಹೀಗೆ ಮುಂದುವರೆಯಲಿ ಎನ್ನುವುದೇ ನಮ್ಮ ಆಶಯ.