ಹುಬ್ಬಳ್ಳಿ: ಬಟ್ಟೆಗಳನ್ನು ಇಸ್ತ್ರಿ ಮಾಡುವ ವೃತ್ತಿಯ ನಗರದ ವ್ಯಕ್ತಿಯೊಬ್ಬರು ಸಂಯೋಜಿಸಿದ ಹಾಡೊಂದು ಯೂಟ್ಯೂಬ್ನಲ್ಲಿ ಭಾರೀ ಹವಾ ಎಬ್ಬಿಸಿದೆ.
ಮೂಲತಃ ಧಾರವಾಡ ಜಿಲ್ಲೆ ಮೊರಬ ಗ್ರಾಮದ ಬಸವರಾಜ್ ಮಡಿವಾಳರ (ಮುದಕಪ್ಪ ) ನಗರದ ಗೋಪನಕೊಪ್ಪದ ಸಂತೋಷ್ ನಗರದಲ್ಲಿ ವಾಸವಾಗಿದ್ದು, ಇಸ್ತ್ರಿ ಹಾಕುವ ವೃತ್ತಿ ಮಾಡುತ್ತಿದ್ದಾರೆ. ಸದ್ಯ ಇವರು ಸಂಯೋಜಿಸಿದ ಗಿಚ್ಚಿ ಗಿಲಿಗಿಲಿ ಎನ್ನುವ ಹಾಡು ಯುಟ್ಯೂಬ್ನಲ್ಲಿ ಸಿಕಾಪಟ್ಟೆ ಟ್ರೆಂಡಿಂಗ್ ಆಗಿದ್ದು, 1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.
ಬಸವರಾಜ್ ಇಸ್ತ್ರಿ ವೃತ್ತಿಯ ಜೊತೆಗೆ ಹಾಡುಗಳ ಸಂಯೋಜನೆಯನ್ನೂ ಮಾಡುತ್ತಿದ್ದು, ಇದುವರೆಗೆ ಸುಮಾರು 50 ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ನೀಡಿ, ಸಂಯೋಜನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬಸವರಾಜ್ ಅವರ ಈ ಸಾಧನೆಗೆ ರಾಜ್ಯ ಮಟ್ಟದ ಬಸವ ಸದ್ಭಾವನ ಪ್ರಶಸ್ತಿ, ಜಾನಪದ ಸಂಸ್ಕೃತಿಕ ಕಲಾ ಸೌರಭ ಪ್ರಶಸ್ತಿ, ಧಾರವಾಡ ಜಿಲ್ಲಾ ಉತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.
ಲಾಕ್ ಡೌನ್ ಸಮಯದಲ್ಲಿ, 'ಹೊರಗೆ ಬಾ ಗೆಳತಿ ಕೊರೊನಾ ಕಮ್ಮಿ ಆಯ್ತು, ಲಾಕ್ ಡೌನ್ ಓಪನ್ ಆಯ್ತು' ಎಂಬ ಹಾಡಿಗೆ ಸಂಗೀತ ಸಂಯೋಜಿಸಿದ ಬಸವರಾಜ್, ಯೂಟ್ಯೂಬ್ನಲ್ಲಿ ಹರಿಬಿಟ್ಟಿದ್ದು ಲಕ್ಷಾಂತರ ಜನರ ಮನ ಗೆದ್ದಿದೆ. ಇವರ ಕಲೆಗೆ ತಕ್ಕ ವೇದಿಕೆ ಸಿಗಲಿ ಎಂಬುವುದು ಬಸವರಾಜ್ ಕುಟುಂಬಸ್ಥರ ಆಶಯವಾಗಿದೆ.