ಹುಬ್ಬಳ್ಳಿ: ಜನರ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಆಮ್ ಆದ್ಮಿ ಆಶ್ವಾಸನೆ ನೀಡಲ್ಲ, ಖಾತ್ರಿ ಮಾಡುತ್ತದೆ. ದೆಹಲಿಯಲ್ಲಿ ನೀಡಿದ ಜನಪರ ಆಡಳಿತವನ್ನೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ನೀಡುತ್ತೇವೆ ಎಂದು ಎಎಪಿ ರಾಜ್ಯ ಸಂಚಾಲಕ ರವಿಶಂಕರ್ ಹಾಗೂ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಹೇಳಿದರು.
ನಗರದಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ಪ್ರಣಾಳಿಕೆಯಲ್ಲಿ ಜನತೆಗೆ ನೀಡುವ ವಾಗ್ದಾನ. ಏಳು ವರ್ಷಗಳ ನಂತರ ಚುನಾವಣೆ ನಡೆಯುತ್ತಿದೆ. ಸೋಲು - ಗೆಲುವು ಸಹಜ. ಜನತೆ ಸಮರ್ಥರಿಗೆ ಮತದಾನ ಮಾಡಬೇಕು. ತಮ್ಮ ಸ್ವಾರ್ಥಕ್ಕೆ ರಾಜಕೀಯ ಮಾಡಿದರೆ ಜನತೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸ್ಮಾರ್ಟ್ ಸಿಟಿ, ಬಿಆರ್ಟಿಸಿ ಯೋಜನೆಯ ಅವೈಜ್ಞಾನಿಕ ಕಾಮಗಾರಿ ಜನತೆಗೆ ತಿಳಿದಿದೆ ಎಂದರು.
25 ಖಾತ್ರಿಗಳನ್ನೊಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಭ್ರಷ್ಟಾಚಾರ ರಹಿತ ಆಡಳಿತ, ಉಚಿತ ಶಿಕ್ಷಣದೊಂದಿಗೆ ಒಂದು ವಾರ್ಡ್ಗೆ ಉತ್ತಮ ದರ್ಜೆ ಶಾಲೆ ನಿರ್ಮಾಣ, ಪ್ರತಿ ಮಕ್ಕಳಿಗೆ ಲ್ಯಾಪ್ಟಾಪ್, ಉಚಿತ ಚಿಕಿತ್ಸೆ ನೀಡುವ ನೂರು ಕ್ಲಿನಿಕ್ ನಿರ್ಮಾಣ, ಪ್ರತಿ ತಿಂಗಳು ಉಚಿತ ನೀರು ಪೂರೈಕೆ ಮಾಡುವ ಭರವಸೆ ನೀಡಿದರು.
ಇದೇ ವೇಳೆ ಮೂರನೇ ಪಟ್ಟಿ ಬಿಡುಗಡೆ ಮಾಡಿ ಸುಮಾರು 38 ಮಂದಿ ಹೆಸರು ಘೋಷಣೆ ಮಾಡಲಾಯಿತು. ಕೆಲವೆಡೆ ಎರಡ್ಮೂರು ಮಂದಿ ಇರುವುದರಿಂದ ಆಯ್ಕೆಯಲ್ಲಿ ವಿಳಂಬವಾಗುತ್ತಿದೆ. ಎಲ್ಲ ವಾರ್ಡ್ಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮಲೆ, ಪ್ರಕಾಶ ನೆಡಗುಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಓದಿ: ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕೆ ಕ್ರಮ: ಸಿಎಂ ಭರವಸೆ