ಹುಬ್ಬಳ್ಳಿ: ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿಯಿಂದ ಮಹೇಶ ಟೆಂಗಿನಕಾಯಿ ಇಂದು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಇದರಿಂದ ಬಿಜೆಪಿಯಲ್ಲಿ ಗುರು ಶಿಷ್ಯರಾಗಿದ್ದ ಶೆಟ್ಟರ್ ಮತ್ತು ಮಹೇಶ್ ಟೆಂಗಿನಕಾಯಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಎರಡು ದಿನಗಳ ಹಿಂದೆಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯ ಮಹಾನಗರ ಪಾಲಿಕೆ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರಿಗೆ ಹಿರಿಯ ನಾಯಕರಾದ ಆರ್ವಿ ದೇಶಪಾಂಡೆ ಮತ್ತು ಎಂಬಿ ಪಾಟೀಲ್ ಅವರು ಶೆಟ್ಟರ್ ಅವರಿಗೆ ಸಾಥ್ ನೀಡಿದರು. ಇದಕ್ಕೂ ಮುನ್ನ ಅನೇಕರೊಂದಿಗೆ ಮಹಾನಗರ ಪಾಲಿಕೆ ಕಚೇರಿಗೆ ಶೆಟ್ಟರ್ ಆಗಮಿಸಿದರು. ಈ ಸಂದರ್ಭದಲ್ಲಿ ಶೆಟ್ಟರ್ ಅವರ ಪತ್ನಿ ಶಿಲ್ಪಾ, ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಸಚಿವ ಎಎಂ ಹಿಂಡಸಗೇರಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡಿ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿಯಿಂದ ಕಡೆಗಣನೆ ಮಾಡಿ ಯಾವ ಪರಿಸ್ಥಿತಿಯಲ್ಲಿ ಹೊರಗೆ ಹಾಕಲಾಯಿತು ಎಂಬ ಎಲ್ಲ ಜನರಿಗೂ ಗೊತ್ತಿದೆ. ಹೀಗಾಗಿ ಇಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾನೆ. ಕಳೆದ ಆರು ಬಾರಿ ನಾನು ಯಾವ ರೀತಿ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದೆ. 25 ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದ್ದೆ. ಈ ಬಾರಿ ಸಹ ಜನತೆ ಆಶೀರ್ವಾದದೊಂದಿಗೆ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿಯ ಮಹೇಶ ತೆಂಗಿನಕಾಯಿ ಗುರುವಿನ ಆಶೀರ್ವಾದ ಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಶಿಷ್ಯನಿಗೆ ಗುರು ಆಶೀರ್ವಾದ ಮಾಡುವುದು ಸಹಜ. ನನಗೆ ಜನರ ಆಶೀರ್ವಾದ ಇದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಹಕಾರ ಇದ್ದು, ಇದರಿಂದ ಅತ್ಯಂತ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂದರು. ಜೊತೆಗೆ ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆಗೆ ಉತ್ತರಿಸಿದ ಶೆಟ್ಟರ್, ನಮ್ಮನ್ನು ಹೊರಹಾಕುವ ಕೆಲಸ ಮಾಡಿದ್ದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಎಲ್ಲದ್ದಕ್ಕೂ ಜನತೆ ಉತ್ತರ ಕೊಡಲಿದ್ದಾರೆ. ನನ್ನ ಗೆಲುವು ಖಚಿತ ಎಂದು ಹೇಳಿದರು.
ಟೆಂಗಿನಕಾಯಿ ನಾಮಪತ್ರ: ಮತ್ತೊಂದೆಡೆ, ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಸಹ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ನಂತರ ಮಹೇಶ್ ಮಾತನಾಡಿದ ಅವರು, ಇಂದು ಪಾಲಿಕೆಯ ಸದಸ್ಯರ ಜೊತೆಗೂಡಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಬೃಹತ್ ಯಾತ್ರೆ ಮೂಲಕ ನಾಮಪತ್ರ ಸಲ್ಲಿಕೆಗೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತನ ಗೆಲುವು ಖಚಿತ ಎಂಬ ವಿಶ್ವಾಸ ಇದೆ. ಅಲ್ಲದೇ, ನಾನು ಗುರು ಜಗದೀಶ್ ಶೆಟ್ಟರ್ ಅವರ ಪಾದಗಳಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.
ಇದನ್ನೂ ಓದಿ: ರಘುನಾಥ್ ನಾಯ್ಡು ಜತೆ ಡಿ ಕೆ ಸುರೇಶ್ ಸಹ ನಾಮಪತ್ರ ಸಲ್ಲಿಕೆ : ಡಿಕೆ ಶಿವಕುಮಾರ್