ಹುಬ್ಬಳ್ಳಿ: ಕೊರೊನಾ ಎಲ್ಲಾ ವರ್ಗದ ಜನರ ಮೇಲೂ ಕೆಟ್ಟ ಪರಿಣಾಮ ಬೀರಿದ್ದು, ಇದಕ್ಕೆ ಪುಸ್ತಕ ವ್ಯಾಪಾರಿಗಳು ಹೊರತಾಗಿಲ್ಲ. ಲಾಕ್ಡೌನ್ನಿಂದ ಪುಸ್ತಕ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಅವಳಿನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಪುಸ್ತಕ ವ್ಯಾಪಾರಸ್ಥರಿದ್ದಾರೆ. ಇಂದಿನ ಡಿಜಿಟಲ್ ಯುಗದಿಂದಾಗಿ ಪುಸ್ತಕಗಳನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳು ಅಕ್ಷರಶಃ ಮೂಲೆ ಸೇರಿದ್ದು, ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಕೊರೊನಾದಿಂದ ಶಾಲಾ- ಕಾಲೇಜುಗಳು ಬಂದ್ ಆಗಿದ್ದು, ವ್ಯಾಪಾರ- ವಹಿವಾಟು ಇಲ್ಲದೇ ಪುಸ್ತಕದ ಅಂಗಡಿಗಳಿಗೆ ನಷ್ಟ ಉಂಟಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಪುಸ್ತಕ ಅಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ. ಇದರಿಂದ ಹಲವು ತರಗತಿಗಳ ಪುಸ್ತಕಗಳು ಮಾರಾಟವಾಗದೆ ಹಾಳಾಗಿ ಹೋಗಿವೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇನ್ನೇನು ಶಾಲೆಗಳು ಪ್ರಾರಂಭವಾಗುತ್ತವೆ ಎಂದು ಕೈಯಲ್ಲಿರುವ ಹಣ ಹಾಗೂ ಸಾಲ ಪಡೆದು ಅಂಗಡಿಗಳಿಗೆ ಮತ್ತಷ್ಟು ಬಂಡವಾಳ ಹಾಕಿದ್ದಾರೆ. ಆದರೆ ಕಿಲ್ಲರ್ ಕೊರೊನಾ ಹಾವಳಿ ಪುಸ್ತಕ ವ್ಯಾಪಾರಸ್ಥರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಸಾಕಷ್ಟು ನಷ್ಟ ಸಂಭವಿಸಿದೆ.