ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ, ಪಶ್ಚಿಮ ಮತ್ತು ಸೆಂಟ್ರಲ್ ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಹುಬ್ಬಳ್ಳಿಯ ಬಿಜೆಪಿ ವಿಭಾಗಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು. ಹುಬ್ಬಳ್ಳಿಯಲ್ಲಿ ನಡೆದ ವಿಭಾಗ ಮಟ್ಟದ ಸಮಾವೇಶದಲ್ಲಿ 99% ರಷ್ಟು ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ. ಎಲ್ಲರೂ ಬಿಜೆಪಿಯನ್ನು ಗೆಲ್ಲಿಸುವ ಜೋಶ್ ನಲ್ಲಿದ್ದಾರೆ ಎಂದರು.
ರಾಯಚೂರು ಜಿಲ್ಲೆಯ ಮಾಜಿ ಸಂಸದ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ ನಾಯಕ್ ಬಿಜೆಪಿ ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಖುದ್ದು ಬರಮಾಡಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಅವರಿಗೆ ಮಾನ್ವಿ ಟಿಕೆಟ್ ಕೊಡುವ ಕುರಿತು ತೀರ್ಮಾನಿಸುತ್ತೇವೆ. ಶಿವಮೊಗ್ಗ ಕ್ಷೇತ್ರದ ಟಿಕೆಟ್ ಬಗ್ಗೆಯೂ ತೀರ್ಮಾನ ಮಾಡಲಾಗುತ್ತದೆ ಎಂದರು.
ಪ್ರತಿ ಚುನಾವಣೆಯೂ ಮಹತ್ವದ್ದು ಜೆ ಪಿ ನಡ್ಡಾ: ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಶಕ್ತಿ ಧಾರೆ ಎರೆಯಬೇಕಿದೆ. ಕುರ್ಚಿಗಾಗಿ ಶಾಸಕರಾಗೋದಲ್ಲ ಒಂದು ವಿಚಾರದಲ್ಲಿ ಮುನ್ನಡೆಯಲು ಇದೊಂದು ಮಾರ್ಗ. ಹೀಗಾಗಿ ಪ್ರತಿ ಚುನಾವಣೆ ಮಹತ್ವದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದರು. ಬಿಜೆಪಿ ವಿಭಾಗಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಅವರು, ಕಮಲವನ್ನು ಅರಳಿಸಬೇಕಿದೆ. ನಾವು ಯಾರ ಎದುರು ಸ್ಪರ್ಧಿಸ್ತಿದ್ದೇವೆ ಅನ್ನೋದು ಮುಖ್ಯ.
60 ವರ್ಷಗಳ ಕಾಲ ಜಾತಿ, ಧರ್ಮ ಹೆಸರಲ್ಲಿ ದೇಶವನ್ನು ಒಡೆದಾಳಿದ್ದಾರೆ. ತಮ್ಮ ಪರಿವಾರದ ಚಿಂತನೆ ಮಾಡುವವರು ಕಾಂಗ್ರೆಸ್ ನವರಾಗಿದ್ದಾರೆ. ಎಟಿಎಂ ಮಷೀನ್ ಮಾಡಿಕೊಳ್ಳಲು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕೆಂದಿದಾರೆ. ಕಾಂಗ್ರೆಸ್ ನದ್ದು ಬರೀ ಭ್ರಷ್ಟಾಚಾರ. ಎರಡೂ ಕೈಯಲ್ಲಿ ಲೂಟಿ ಮಾಡಬೇಕೆಂದು ಕಾಂಗ್ರೆಸ್ ನವರು ಹವಣಿಸ್ತಿದ್ದಾರೆ. ಹೀಗಾಗಿ ಅವ್ರಿಗೆ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಮತ್ತೊಂದೆಡೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಸಿಗದೆ ನಿರಾಶರಾದ ಮುಖಂಡರು ಪಕ್ಷವನ್ನು ತೊರೆಯುತ್ತಿದ್ದಾರೆ. ಇದೀಗ ಕಾಂಗ್ರೆಸ್ನ ಮಾಜಿ ಸಂಸದ ಹಾಗೂ ರಾಯಚೂರು ಜಿಲ್ಲೆಯ ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ್ ಕಾಂಗ್ರೆಸ್ ತೊರೆದು ಬಿಜೆಪಿ ಪಾಳಯ ಸೇರಿದ್ದಾರೆ. ಮಾನವಿ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವಿ. ನಾಯಕ ಮಂಗಳವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದಾರೆ.
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಯಚೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಎರಡನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ ನಾಯಕ ವಿರುದ್ಧ ಪರಾಜಿತಗೊಂಡರು.
ಇದನ್ನೂ ಓದಿ: ಸಚಿವ ಶಿವರಾಮ್ ಹೆಬ್ಬಾರ್ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ: ಹೆಬ್ಬಾರ್ ಆಸ್ತಿ ಎಷ್ಟುಗೊತ್ತಾ?