ಹುಬ್ಬಳ್ಳಿ: ಆಟೋದಲ್ಲಿ ಮರೆತು ಹೋಗಿದ್ದ ಹಣ, ಮೊಬೈಲ್ ಹಾಗೂ ಇತರೆ ದಾಖಲೆಗಳಿದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಆಟೋ ಚಾಲಕನೋರ್ವ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಶಾಂತ ಬುಗುಡಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ. ನಗರದ ಗೋಕುಲ್ ರಸ್ತೆಯ ಸಿಲ್ವರ್ ಟೌನ್ನಿಂದ ಬಸವೇಶ್ವರ ನಗರದವರೆಗೆ ಮಂಗಳಾ ಗಣೇಕರ್ ಎಂಬುವರು ಆಟೋದಲ್ಲಿ ಪ್ರಯಾಣ ಮಾಡಿದ್ದರು. ಆದ್ರೆ ಇಳಿಯುವಾಗ ಬ್ಯಾಗನ್ನು ಆಟೋದಲ್ಲಿಯೇ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ ಪ್ರಶಾಂತ ಗೋಕುಲ್ ಠಾಣೆಗೆ ತೆರಳಿ ಬ್ಯಾಗನ್ನು ಹಿಂತಿರುಗಿಸಿದ್ದಾರೆ.
ಬ್ಯಾಗ್ನಲ್ಲಿದ್ದ 4 ಸಾವಿರ ನಗದು, ಮೊಬೈಲ್, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಎಲ್ಐಸಿ ಕಾಗದ ಪತ್ರಗಳನ್ನು ಮಹಿಳೆಗೆ ಒಪ್ಪಿಸಿದ್ದಾರೆ. ಆಟೋ ಚಾಲಕನ ಕಾರ್ಯಕ್ಕೆ ಮಹಿಳೆ ಧನ್ಯವಾದ ಅರ್ಪಿಸಿದ್ದು, ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.