ಹುಬ್ಬಳ್ಳಿ: ಇಲ್ಲಿನ ಖ್ಯಾತ ಉದ್ಯಮಿ ಭರತ್ ಜೈನ್ ಎಂಬವರ ಪುತ್ರನ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಪುತ್ರನ ಕೊಲೆಗೆ ಅಪ್ಪನೇ ಸುಪಾರಿ ನೀಡಿದ್ದ ಎಂಬುದಕ್ಕೆ ಹಂತಕರು ಮಗನನ್ನು ಕೊಂದ ಬಳಿಕ ಸಾಕ್ಷ್ಯಕ್ಕಾಗಿ ತಂದೆಗೆ ಕಳಿಸಿದ್ದರು ಎನ್ನಲಾದ ಫೋಟೋ ಲಭ್ಯವಾಗಿದೆ. ಇದೀಗ ಮೃತದೇಹವನ್ನು ಹೂತು ಹಾಕಿರುವ ಸ್ಥಳವೂ ಪತ್ತೆಯಾಗಿದೆ.
ದುಶ್ಚಟಗಳಿಗೆ ದಾಸನಾಗಿದ್ದ ಮಗ ಅಖಿಲ್ ಜೈನ್ ಕೊಲೆಗಾಗಿ ಭರತ್ ಜೈನ್, ಮಹದೇವ ನಾಲವಾಡ ಎಂಬುವವನಿಗೆ 10 ಲಕ್ಷ ರೂ ಸುಪಾರಿ ನೀಡಿದ್ದ. ಅಖಿಲ್ ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದುದಲ್ಲದೇ ತಂದೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದನಂತೆ. ಇದರಿಂದ ಮಾನಸಿಕವಾಗಿ ನೊಂದ ತಂದೆ ಸುಪಾರಿ ಕೊಟ್ಟು ಮಗನ ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿಸೆಂಬರ್ 1ರಂದು ಕೊಲೆ ಮಾಡುವ ಉದ್ದೇಶದಿಂದಲೇ ಭರತ್ ಜೈನ್ ಮಗ ಅಖಿಲ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಭರತ್ ಜೊತೆಗೆ ಆರೋಪಿ ಸಂಖ್ಯೆ 4 ರೆಹಮಾನ್ ಕೂಡಾ ಜೊತೆಯಲ್ಲಿದ್ದ. ಕಲಘಟಗಿ ಬಳಿ ಕೊಲೆ ಮಾಡಿ, ಶವ ಸಿಗದಂತೆ ಪ್ರಕರಣ ಮುಚ್ಚಿ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಭರತ್ ಜೈನ್ ಸೇರಿ ಐವರ ವಿರುದ್ದ ದೂರು ದಾಖಲಾಗಿದೆ.
ಭರತ್ ಜೈನ್, ಮಹದೇವ ನಾಲವಾಡ, ಸಲೀಮ್ ಸಲಾವುದ್ದೀನ್, ರೆಹಮಾನ್ ಹಾಗೂ ಓರ್ವ ಅಪರಿಚಿತನ ವಿರುದ್ಧ ದೂರು ದಾಖಲಾಗಿದೆ. ಐಪಿಸಿ ಕಲಂ 302, 201, 364 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭರತ್ ಜೈನ್ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಅಖಿಲ್ ಶವ ಹೂತು ಹಾಕಿದ ಸ್ಥಳ ಪತ್ತೆ: ಹತ್ಯೆಗೊಳಗಾಗಿದ್ದ ಅಖಿಲ್ನ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರಿಗೆ ಕೊನೆಗೂ ಶವ ಹೂತು ಹಾಕಿರುವ ಸ್ಥಳ ಪತ್ತೆಯಾಗಿದೆ. ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿಯ ಗದ್ದೆಯಲ್ಲಿ ಶವವನ್ನು ಹೂಳಲಾಗಿದೆ. ಕತ್ತಲಾದ ಕಾರಣ ನಾಳೆ ಬೆಳಗ್ಗೆ ಶವವನ್ನು ಹೊರತೆಗೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ಸಾಹಿಲ್ ಬಾಗ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.
ಇದನ್ನೂ ಓದಿ: ಉದ್ಯಮಿ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಗನ ಕೊಲೆಗೆ ತಂದೆಯಿಂದಲೇ ಸುಪಾರಿ?