ಹುಬ್ಬಳ್ಳಿ: ಅವಳಿ ನಗರದ ಜನರು ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಿಸಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಜನರ ಮನವಿಗೆ ಕಿಮ್ಮತ್ತು ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಹೌದು, ಹುಬ್ಬಳ್ಳಿ-ಧಾರವಾಡದ ಬಹುತೇಕ ರಸ್ತೆಯಲ್ಲಿ ಕೇವಲ ಅರ್ಧದಷ್ಟು ರಸ್ತೆ ಮಾತ್ರ ಸಂಚಾರಕ್ಕೆ ಸೂಕ್ತವಾಗಿವೆ. ಇನ್ನರ್ಧದಷ್ಟು ರಸ್ತೆಗಳು ಕಂಟಕವಾಗಿ ಮಾರ್ಪಟ್ಟಿವೆ. ಇನ್ನು ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಂದಾಗಿ ರಸ್ತೆಗಳು ಬಹಳಷ್ಟು ಹದಗೆಟ್ಟಿವೆ.
ಮಳೆಯಿಂದಾಗಿ ಕಚ್ಚಾ ರಸ್ತೆಗಳು ಕೆಸರಿನಿಂದ ಕೂಡಿದ್ದು, ಕೆಲವೆಡೆ ಜನ ಸಂಚರಿಸಲಾಗದ ಸ್ಥಿತಿ ತಲುಪಿವೆ. ಪರಿಣಾಮ, ಟ್ರಾಫಿಕ್ ಸಮಸ್ಯೆ ಕೂಡಾ ಹೆಚ್ಚಾಗುತ್ತಿದ್ದು, ಪೊಲೀಸರು ಕೂಡಾ ವಾಹನ ನಿಯಂತ್ರಿಸಲು ಹೈರಾಣಾಗುತ್ತಿದ್ದಾರೆ.
ಇತ್ತ ಒಳಚರಂಡಿ, ನಗರೋತ್ಥಾನ ಇತರೆ ಯೋಜನೆಗಳಡಿಯ ಕಾಮಗಾರಿಗಳು ನಿಧಾನಗತಿಯ ಜತೆಗೆ ಬೇಕಾಬಿಟ್ಟಿಯಾಗಿ ನಡೆಯುತ್ತಿದ್ದು, ಬೇಸಿಗೆಯಲ್ಲಿ ಧೂಳಿನ ಮಜ್ಜನವಾದರೆ, ಮಳೆಗಾಲದಲ್ಲಿ ಕೆಸರಿನ ಸಿಂಚನವಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದ 313 ಹಳ್ಳಿಗಳಿಗೆ ಕಾಲಿಡದ ಕೊರೊನಾ...!
ಇನ್ನು, ನಗರದ ಹಳೆಯ ಕೋರ್ಟ್ ವೃತ್ತ ಪಕ್ಕದಲ್ಲಿ ವಾಹನ ಪಾರ್ಕಿಂಗ್ ಕಾಮಗಾರಿ ಹಿನ್ನೆಲೆ ರಸ್ತೆ ಬಂದ್ ಮಾಡಲಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಾದ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೆಚ್ಚು ವಾಹನ ದಟ್ಟಣೆಯಿಂದ, ಜನರು ನಡೆದಾಡಲು ಆಗದಷ್ಟು ಹದಗೆಟ್ಟು ಹೋಗಿದೆ. ಕೋವಿಡ್ ಆತಂಕದಿಂದ ಸ್ವಲ್ಪ ಮಟ್ಟಿಗೆ ನಿರಾಳರಾದ ಜನರಿಗೆ, ನಗರದಲ್ಲಿನ ರಸ್ತೆ ನೋಡಿ ಮತ್ತಷ್ಟು ಆತಂಕ ಎದುರಾಗಿದೆ.