ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ ಅವರ ಗೌನ್ ಗಲಾಟೆ ತಾರ್ಕಿಕ ಅಂತ್ಯ ಕಂಡಿದೆ. ಹುಬ್ಬಳ್ಳಿ - ಧಾರವಾಡದಲ್ಲಿ ಅಭಿವೃದ್ಧಿಗಿಂತ ಗೌನ್ ಹೆಚ್ಚು ಸದ್ದು ಮಾಡಿತ್ತು. ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಸಹ ಈ ಗೌನ್ ನುಂಗಿ ಹಾಕಿತ್ತು.
ಗೌನ್ ಹಾಕಿಕೊಳ್ಳವುದಿಲ್ಲ ಎಂದು ಮೇಯರ್ ಈರೇಶ ಅಂಚಟಗೇರಿ ಪಟ್ಟು ಹಿಡಿದಿದ್ದರು. ಗೌನ್ ಹಾಕಿಕೊಳ್ಳುವುದು ಬ್ರಿಟಿಷ್ ಪದ್ದತಿ, ಅದನ್ನು ನಾನು ಅನುಸರಿಸುವುದಿಲ್ಲ ಎಂದು ರಾಷ್ಟ್ರಪತಿ ಅವರ ಸ್ವಾಗತಕ್ಕೂ ಗೌನ್ ಧರಿಸಿರಲಿಲ್ಲ. ಇದು ಪಾಲಿಕೆ ಪ್ರತಿಪಕ್ಷ ಸೇರಿದಂತೆ ಸ್ವಪಕ್ಷದ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿತ್ತು.
ಅಲ್ಲದೇ ಅವಳಿ ನಗರಕ್ಕೆ ಗಣ್ಯರು ಭೇಟಿ ನೀಡಿದಾಗ ಗೌನ್ ಹಾಕಿಕೊಳ್ಳದೇ ಸ್ವಾಗತ ಕೋರಿದ್ದರು. ಗೌನ್‌ಗೆ ತನ್ನದೇ ಆದ ಗೌರವ ಇದೆ, ಅದನ್ನು ಕಾಪಾಡಬೇಕು. ಸಾಮಾನ್ಯ ಸಭೆಗೆ ಗೌನ್ ಹಾಕಿಕೊಂಡು ಬರಬೇಕೆಂದು ವಿರೋಧ ಪಕ್ಷದ ಪಾಲಿಕೆಯ ಸದಸ್ಯರು ಒತ್ತಡ ಹಾಕಿದ್ದರು. ಇದಕ್ಕಾಗಿ ಸ್ಪಷ್ಟೀಕರಣಕ್ಕಾಗಿ ಸರ್ಕಾರಕ್ಕೆ ಮೇಯರ್ ಈರೇಶ ಅಂಚಟಗೇರಿ ಪತ್ರ ಬರೆದಿದ್ದರು.
ಈಗ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಸತೀಶ್ ಕುಮಾರ್ ಡಿಎಂ ಅವರು ಸ್ಪಷ್ಟೀಕರಣ ನೀಡಿದ್ದು, ಗೌನ್ ಹಾಕಿಕೊಳ್ಳುವುದು ಆಯಾ ಮೇಯರ್ ವಿವೇಚನೆಗೆ ಬಿಟ್ಟಿದ್ದು, ಎಂದು ಸ್ಪಷ್ಟನೆ ನೀಡಿದ್ದು, ಒಂದು ಹಂತದಲ್ಲಿ ಮೇಯರ್ ಅಂಚಟಗೇರಿ ಅವರಿಗೆ ಜಯ ಸಿಕ್ಕಂತಾಗಿದೆ. ಮತ್ತು ಗೌನ್ ಪ್ರಕರಣ ಸದ್ಯಕ್ಕೆ ಅಂತ್ಯ ಕಂಡಂತಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗೌನ್ ಗದ್ದಲ: ಅನಿಷ್ಟಾವಧಿವರೆಗೆ ಸಭೆ ಮುಂದೂಡಿಕೆ