ಧಾರವಾಡ: ಎಲೆಕ್ಟ್ರಿಕ್ ಬಿಲ್ ಕಲೆಕ್ಟರ್‌ವೋರ್ವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಧಾರವಾಡ ಹೊರವಲಯದ ಹಳಿಯಾಳ್ ಬೈಪಾಸ್ ರಸ್ತೆಯಲ್ಲಿ ಇಂದು ನಡೆದಿದೆ. ಬಾಡ ಗ್ರಾಮದ ರಜಾಕ್ ಕವಲಗೇರಿ ಎಂಬವರು ಹತ್ಯೆಯಾದ ವ್ಯಕ್ತಿ. ಬೈಕ್ನಲ್ಲಿ ಬಂದು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಹಳಿಯಾಳ ರಸ್ತೆಯ ಬೈಪಾಸ್ ಸೇತುವೆ ಬಳಿ ಘಟನೆ ನಡೆದಿದೆ.
ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ವ್ಯಕ್ತಿ ಹೆಸ್ಕಾಂ ಬಿಲ್ ಕಲೆಕ್ಟರ್ ಆಗಿದ್ದರು ಎಂದು ತಿಳಿದುಬಂದಿದೆ. ಕೆಲಸ ಮುಗಿಸಿ ವಾಪಸ್ ತೆರಳುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷನ ಬರ್ಬರ ಹತ್ಯೆ: ಕೆಲವು ತಿಂಗಳುಗಳ ಕಾಲ ತಣ್ಣಗಿದ್ದ ಕಲಬುರಗಿಯ ಭೀಮಾತೀರದಲ್ಲಿ ಹಳೆ ದ್ವೇಷಕ್ಕೆ ನೆತ್ತರು ಹರಿದಿದೆ. ಅಫಜಲಪುರ ತಾಲೂಕಿನ ಚೌಡಾಪುರ ಬಸ್ ನಿಲ್ದಾಣ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ ನಡೆದಿದೆ. ಅಫಜಲಪುರ ತಾಲೂಕಿನ ಮದರಾ (ಬಿ) ಗ್ರಾ.ಪಂ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ ಕೊಲೆಯಾಗಿದ್ದಾರೆ. ಹಂತಕರು ಪರಾರಿಯಾಗಿದ್ದಾರೆ.
ಮದರಾ (ಬಿ) ಗ್ರಾಮದಿಂದ ಇಂದು ಬೆಳಗ್ಗೆ ಕೆಲಸದ ನಿಮಿತ್ತ ಚೌಡಾಪುರಕ್ಕೆ ಆಗಮಿಸಿದ್ದ ಗೌಡಪ್ಪಗೌಡ ಪಾಟೀಲ್, ಬಸ್ ನಿಲ್ದಾಣ ಮುಂಭಾಗದಲ್ಲಿರುವ ಗ್ಯಾರೇಜ್ನಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ವಾಹನವೊಂದರಲ್ಲಿ ಆಗಮಿಸಿದ ದುಷ್ಕರ್ಮಿಗಳು ಗೌಡಪ್ಪಗೌಡ ಕಣ್ಣಿಗೆ ಖಾರದ ಪುಡಿ ಎರಚಿ ನೋಡ ನೋಡುತ್ತಿದ್ದಂತೆ ಹರಿತ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಹಂತಕರು ಪಕ್ಕದಲ್ಲಿದ್ದ ಸೈಜುಗಲ್ಲನ್ನೂ ತಲೆಮೇಲೆ ಎತ್ತಿಹಾಕಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ ಗೌಡಪ್ಪಗೌಡ ಪಾಟೀಲ್ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಗೌಡಪ್ಪಗೌಡ ಕಾಂಗ್ರೆಸ್ ಮುಖಂಡರಾಗಿದ್ದರು. ಶಾಸಕ ಎಂ.ವೈ.ಪಾಟೀಲ್ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಕಳೆದ 30 ವರ್ಷಗಳಿಂದ ಯಾವುದೋ ಕಾರಣಕ್ಕೆ ರಾಜಕೀಯ ವೈಷಮ್ಯ ಹೊಂದಿದ್ದರು. ಈ ನಡುವೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಿದ್ದಾಜಿದ್ದಿನಿಂದ ಮದರಾ (ಬಿ) ಗ್ರಾ. ಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಚುನಾವಣೆಯಲ್ಲಿ ಗಲಾಟೆ, ಮನಸ್ತಾಪಗಳು ಸಂಭವಿಸಿದ್ದವು. ಹೀಗಾಗಿ ರಾಜಕೀಯ ವೈಷಮ್ಯ ಬೆಳೆದಿತ್ತು ಎನ್ನಲಾಗಿದೆ.
ಇನ್ನೊಂದೆಡೆ, ಕಂಕರ್ ಮಷಿನ್, ವೈನ್ ಶಾಪ್ ಸೇರಿದಂತೆ ಉದ್ಯಮಿಯಾಗಿ ಕೂಡ ಗೌಡಪ್ಪಗೌಡ ಬೆಳೆಯುತ್ತಿದ್ದರು. ಒಂದೆಡೆ ರಾಜಕೀಯವಾಗಿ ಇನ್ನೊಂದೆಡೆ ಉದ್ಯಮಿಯಾಗಿ ಬೆಳೆಯುವುದನ್ನು ಸಹಿಸದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಲೆಯ ಹಿಂದೆ ಕಾಣದ ಕೈಗಳಿವೆ. ಸೂಕ್ತ ತನಿಖೆ ನಡೆಸಿ ಸತ್ಯ ಬಯಲಿಗೆಳೆಯಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಸರ್ಕಾರ ಗಮನ ಹರಿಸಬೇಕು. ಪೊಲೀಸರು ಶೀಘ್ರವೇ ಕೊಲೆಗಡುಕರನ್ನು ಹಿಡಿದು ಕಂಬಿ ಹಿಂದೆ ತಳ್ಳಬೇಕೆಂದು ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಆಗ್ರಹಿಸಿದ್ದಾರೆ. ದೇವಲ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭೀಮಾತೀರದಲ್ಲಿ..: ಗ್ರಾಮ ಪಂಚಾಯತಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ