ಹುಬ್ಬಳ್ಳಿ: "ರಾಜ್ಯದಲ್ಲಿ ಡ್ರಗ್ಸ್ ತಡೆಗೆ ನಾವು ತೀರ್ಮಾನ ಮಾಡಿದ್ದೇವೆ. ಈ ಕುರಿತು ಕಟ್ಟುನಿಟ್ಟಿನ ಸೂಚನೆಯನ್ನು ನಮ್ಮ ಅಧಿಕಾರಿಗಳಿಗೆ ಕೊಟ್ಟಿದ್ದೇನೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿಂದು ಪೊಲೀಸ್ ಕಮಿಷನರೇಟ್ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗೋವಾ, ಒಡಿಶಾದಿಂದ ಡ್ರಗ್ಸ್ ಬರಬಹುದು. ಹುಬ್ಬಳ್ಳಿಯ ಜನರಿಗೆ ಇದರಿಂದ ಅನಾಹುತ ಆಗುವುದು ಬೇಡ ಎಂದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ" ಎಂದರು.
"ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ಇಲಾಖೆ ಸಮರ್ಥವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಮೂಲಕ ಸರ್ಕಾರ, ಜನಸಮುದಾಯಕ್ಕೆ ವಿಶ್ವಾಸ ಮೂಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆಯಿದೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸರ್ಕಾರದ ನೀತಿ ನಿಯಮಗಳ ಬಗ್ಗೆ ಸಹ ಇಲಾಖೆ ಎಚ್ಚರಿಕೆ, ಸೂಚನೆ, ಮಾರ್ಗದರ್ಶನ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು" ಎಂದು ಹೇಳಿದರು.
"ಹುಬ್ಬಳ್ಳಿಯಲ್ಲಿ ಅಪರಾಧಗಳ ಸಂಖ್ಯೆ ಬೇರೆ ಜಿಲ್ಲೆಗಳಿಗಿಂತ ಭಿನ್ನವಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ಶಾಂತಿಯಿಂದ ಇದೆ. ಎಲ್ಲಾ ಜಿಲ್ಲೆಗಳಲ್ಲಿ ಇರುವ ಹಾಗೆ ಕ್ರೈಮ್ ರೇಟ್ ಇದೆ. ಆದರೆ ಅವೆಲ್ಲವೂ ನಿಯಂತ್ರದಲ್ಲಿದೆ. ಜ್ವಲಂತ ಸಮಸ್ಯೆಗಳು ಮೊದಲಿನಂತೆ ಇಲ್ಲ ಎನ್ನುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಶೋಷಿತರು, ಬಡವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಭೆ ನಡೆಸಿ ನ್ಯಾಯ ಒದಗಿಸಲು ಹೇಳಿದ್ದೇನೆ. ಪ್ರತಿ ತಿಂಗಳು ಎಸ್ಸಿ, ಎಸ್ಟಿ ಸಭೆ ಮಾಡಿ, ಅವರ ಅಹವಾಲುಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಠಾಣೆಯಲ್ಲಿ ಪ್ರತಿ ತಿಂಗಳು ಸಭೆ ನಡೆಸಬೇಕು. ಕಮಿಷನರೇಟ್ ನಲ್ಲಿಯೂ ಸಭೆ ಬಗ್ಗೆ ದಾಖಲೆ ಇಡಲು ಹೇಳಿದ್ದೇನೆ" ಎಂದು ತಿಳಿಸಿದರು.
"ಪ್ರತಿ ತಿಂಗಳು ಸಬ್ ಇನ್ಸ್ಪೆಕ್ಟರ್ ಮೇಲಿನ ಹಂತದ ಪೊಲೀಸ್ ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಅಂದು ಪೊಲೀಸ್ ಡೇಯನ್ನಾಗಿ ಆಚರಿಸಬೇಕು. ಅಂದು ಟ್ರಾಫಿಕ್, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸರ ಸಹಾಯದ ಬಗ್ಗೆ ತಿಳಿಸಬೇಕು. ಇದನ್ನು ಕಮಿಷರ್, ಡಿಸಿಪಿ, ಇನ್ಸ್ಪೆಕ್ಟರ್ಗಳು ಮಾಡಬೇಕು. ಇದರ ದಾಖಲೆಗಳನ್ನೂ ಸಹ ಇಡಬೇಕು. ಮಕ್ಕಳಿಗೆ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದು. ಜನಸ್ನೇಹಿ ಪೊಲೀಸ್ ಆಗಲು ಸೂಚಿಸಿದ್ದೇನೆ" ಎಂದರು.
ಪೊಲೀಸ್ ಕಮಿಷನರೇಟ್ಗಳಿಗೆ ಹಿರಿಯ ಐಪಿಎಸ್ ಅಧಿಕಾರಿಗಳ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, "ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅಲಾಟ್ಮೆಂಟ್ ಮತ್ತು ಪ್ರಮೋಷನ್ಸ್ ಸರಿಯಾಗಿ ಮಾಡಿಲ್ಲ. ಐಜಿ ಸಂಖ್ಯೆ ಕಡಿಮೆಯಿತ್ತು. ಅವರ ಕೊರತೆಯಿಂದಾಗಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಮಿಷನರೇಟ್ನಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ" ಎಂದು ಸ್ಪಷ್ಟನೆ ನೀಡಿದರು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಮಾತನಾಡಿ, "ಈ ಹಿಂದೆ ಯಾವ ಆಧಾರದ ಮೇಲೆ ಅನುಮತಿ ನೀಡಿದ್ದಾರೋ ನೋಡಬೇಕು. ಅಂದಿನ ಪರಿಸ್ಥಿತಿ ನೋಡಿಕೊಂಡು ಅವಕಾಶ ನೀಡಬೇಕೋ, ಬೇಡವೋ ಎಂಬುದು ಮಹಾನಗರ ಪಾಲಿಕೆ ಕಮಿಷನರ್ ಅವರಿಗೆ ಬಿಟ್ಟ ವಿಚಾರ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ ತೆಗೆದುಕೊಳ್ಳಲಿದೆ" ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಕೋರ್ಟ್ ನಿರ್ದೇಶನಕ್ಕೆ ಕಾಯುತ್ತಿದ್ದೇವೆ- ಗೃಹ ಸಚಿವ ಜಿ.ಪರಮೇಶ್ವರ್