ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಇಂದು ಸಿಎಎ ಜಾಗೃತಿ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಸ್ವಚ್ಚತೆ ಭಾಗ್ಯ ಕಾಣುತ್ತಿದೆ. ಬಹುದಿನಗಳಿಂದ ಬಿದ್ದಿರುವ ಕಸಕ್ಕೆ ಇಂದು ಮುಕ್ತಿ ಸಿಕ್ಕಂತಾಗಿದೆ.
ಬೆಳಗ್ಗೆಯಿಂದಲೇ ಹು-ಧಾ ಮಹಾನಗರ ಪಾಲಿಕೆ ಸಿಬ್ಬಂದಿ ಸ್ವಚ್ಚತಾ ಕಾರ್ಯ ಕೈಗೊಂಡಿದ್ದು, ಹಳೆಯ ತ್ಯಾಜ್ಯ ಸಚಿವರ ಆಗಮನದ ಹಿನ್ನೆಲೆಯಲ್ಲಿ ಸ್ವಚ್ಛವಾಗಿರುವುದು ವಿಶೇಷವಾಗಿದೆ.
ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಸಮಾವೇಶದ ವೇದಿಕೆ:
ಎಲ್ಲೆಲ್ಲೂ ಕೇಸರಿ ವರ್ಣದ ಧ್ವಜಗಳು, ಹಸಿರಿನ ಹಾಸು. ಇವೆಲ್ಲದರ ಮಧ್ಯೆ ಭವ್ಯವಾಗಿ ನಿರ್ಮಾಣಗೊಂಡಿರುವ ವೇದಿಕೆ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ನೆಹರೂ ಮೈದಾನದಲ್ಲಿ ನಡೆಯಲಿರುವ ಸಮಾವೇಶದ ಮುಖ್ಯ ವೇದಿಕೆ ನಿರ್ಮಾಣವಾಗುತ್ತಿದ್ದು, ಇದು 40 ಅಡಿ ಉದ್ದ 60 ಅಡಿ ಅಗಲವಾಗಿದೆ. ಇದರಲ್ಲಿ ಪ್ರಮುಖರನ್ನು ಕುಳಿತುಕೊಳ್ಳಲು ಅವಕಾಶ ನೀಡಲಾಗಿದ್ದು, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ ಪಕ್ಕದಲ್ಲಿ ಸಣ್ಣ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ಸ್ಥಳೀಯ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮುಖ್ಯ ವೇದಿಕೆ ಮುಂಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶದಲ್ಲಿ ಅಮಿತ್ ಶಾ ಅವರ ಭಾಷಣ ಜನರಿಗೆ ಕಾಣುವಂತೆ ಅನುಕೂಲವಾಗಲು ನೆಹರೂ ಮೈದಾನದಲ್ಲಿ 4 ಹಾಗೂ ಕೃಷ್ಣ ಭವನದ ಎದುರು, ಚೇಂಬರ್ ಆಫ್ ಕಾಮರ್ಸ್ ಎದುರು ತಲಾ ಒಂದೊಂದು ಎಲ್ಇಡಿ ಅಳವಡಿಸಲಾಗುತ್ತಿದ್ದು, ಹೊರಗಡೆ ಬರುವ ವಾಹನಗಳಿಗೆ ನಾಲ್ಕು ಕಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕೇಸರಿಮಯಗೊಳಿಸಲು ಸಿದ್ದತೆ: ಸಮಾವೇಶದ ಹಿನ್ನೆಲೆಯಲ್ಲಿ ನಗರದ ಪ್ರಮುಖ ನಗರಗಳಲ್ಲಿ ಪಕ್ಷದ ಧ್ವಜಗಳು, ಬಂಟಿಂಗ್ಸ್, ಪ್ಲೇಕ್ಸ್ ಗಳು, ಸೇರಿದಂತೆ ಐ ಸಪೋರ್ಟ್ ಸಿಎಎ ಎಂದು ಬರೆದಿರುವ ಸುಮಾರು 50 ಸಾವಿರ ಕೇಸರಿ ಟೋಪಿಗಳನ್ನು ಸಿದ್ದಪಡಿಸಲಾಗಿದೆ. ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣ ವರೆಗೆ ಪಕ್ಷದ ಧ್ವಜಗಳನ್ನು ಕಟ್ಟಿ ಗೃಹ ಸಚಿವ ಅಮಿತ್ ಶಾ ಗೆ ಭವ್ಯ ಸ್ವಾಗತ ಮಾಡಲು ಸಿದ್ದತೆ ನಡೆಸಿದ್ದಾರೆ.
ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ: ಸಮಾವೇಶಕ್ಕೆ ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ, ನವಲಗುಂದ, ಕಲಘಟಗಿ, ಕುಂದಗೋಳ ಸೇರಿದಂತೆ ಮುಂತಾದ ಕಡೆಯ ಜನರು ಆಗಮಿಸುತ್ತಿದ್ದು, ಈ ಹಿನ್ನೆ ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯನ್ನು ಕಾರ್ಯಕ್ರಮದ ಸಂಘಟಕರು ಇಟ್ಟುಕೊಂಡಿದ್ದಾರೆ.