ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಂದು ಹೋಳಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಹಿರಿಯರು ಕಿರಿಯರು ಎಂಬ ವಯಸ್ಸಿನ ಭೇದ ಭಾವವಿಲ್ಲದೆ ಎಲ್ಲರೂ ರಂಗು ರಂಗಿನ ಬಣ್ಣದಲ್ಲಿ ಮಿಂದೆದ್ದರು. ಸುಮಾರು ಸಾವಿರಕ್ಕೂ ಆಧಿಕ ಪೋಲಿಸರು ನಗರದ ವಿವಿಧೆಡೆ ಬಿಡು ಬಿಟ್ಟು ಶಾಂತಿಯುತವಾಗಿ ಬಣ್ಣದಾಟ ಆಡುವಂತೆ ನೋಡಿಕೊಂಡರು.
ಯಾವುದೇ ಜಾತಿ-ಮತ ಭೇದವಿಲ್ಲದೆ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಹೋಳಿ ಆಚರಿಸಿದರು. ಹುಣ್ಣಿಮೆಯ ದಿನದಂದೆ ಇಲ್ಲಿ ಕಾಮಣ್ಣ ಮತ್ತು ರತಿಯನ್ನು ಪೂಜೆಗೆ ಪ್ರತಿಷ್ಟಾಪಿಸಿ ಐದು ದಿನಗಳ ಕಾಲ ವಿಶಿಷ್ಟವಾಗಿ ಪೂಜೆ ಸಲ್ಲಿಸಲಾಗುತ್ತದೆ. ಐದನೇ ದಿನದಂದು ರಂಗಪಂಚಮಿ ಆಚರಿಸಲಾಗುತ್ತದೆ.
ಹಾಗಾಗಿ ಹುಬ್ಬಳ್ಳಿ ಜನತೆಗೆ ಹೋಳಿ ಹಬ್ಬ ಬಂತೆಂದರೆ ಇನ್ನಿಲ್ಲದ ಸಂತೋಷ. ನಗರದಲ್ಲಿ ಡ್ಯಾನ್ಸ್ ಮಾಡುವ ಮೂಲಕ ರಂಗಿನಾಟವನ್ನು ಆಡುತ್ತಾರೆ. ಆದರೆ ಈ ಬಾರಿ ಕೊರೊನಾ ಕರಿನೆರಳಿನಿಂದ ಕೊಂಚ ಮಟ್ಟಿಗೆ ಸಂಭ್ರಮ ಕಡಿಮೆಯಾಗಿದ್ದಂತೂ ಸತ್ಯ.
ಇದನ್ನೂ ಓದಿ: ಚಿನ್ನದ ನಾಡಿನಲ್ಲಿ ಕಲ್ಲಿನ ಲೈಬ್ರರಿ.. ಇತಿಹಾಸ ಸಾರುತ್ತಿವೆ ಶಿಲೆಗಳು
ನಗರದಲ್ಲಿ ಶಾಂತಿ ಕಾಪಾಡಲೆಂದು ವಿವಿಧ ಪ್ರದೇಶದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು. ಸುಮಾರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹೋಳಿ ಹಬ್ಬದ ಮೇಲೆ ಕಣ್ಣಿಟ್ಟು, ಶಾಂತಿಯುತ ಆಚರಣೆಗೆ ಕಾರಣರಾದರು.
ಹುಬ್ಬಳ್ಳಿಯಲ್ಲಿ ಸತತ ಐದು ದಿನಗಳಿಂದ ಇದ್ದ ಬಣ್ಣದ ಗುಂಗಿಗೆ ಇಂದು ತೆರೆ ಬಿದ್ದಿದೆ. ಸಾರ್ವಜನಿಕರು ಅತ್ಯಂತ ಖುಷಿಯಿಂದ ರಂಗಿನ ಆಟದಲ್ಲಿ ಪಾಲ್ಗೊಂಡರು.