ಹುಬ್ಬಳ್ಳಿ: ಗಣೇಶನನ್ನು ಸಾಮಾನ್ಯವಾಗಿ ಒಂದು, ಮೂರು, ಐದು, ಏಳು, ಒಂಬತ್ತು ಹಾಗೂ ಹನ್ನೊಂದು ದಿನಗಳವರೆಗೆ ಪ್ರತಿಷ್ಠಾಪನೆ ಮಾಡುತ್ತಾರೆ. ಆದರೆ ಕಲಘಟಗಿ ತಾಲೂಕಿನ ಕೆಲವೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆಯು ವಿಶೇಷತೆಯಿಂದ ಕೂಡಿದ್ದು, ಕೇವಲ ಅರ್ಧ ದಿನ ಗಣೇಶ ಪೂಜಿಸಲ್ಪಡುತ್ತಾನೆ.
ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಅವರ ವಾಡೆದಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಣಪತಿ ಅರ್ಧ ದಿನ ವಿರಾಜಮಾನವಾಗುವುದು ವೈಶಿಷ್ಟ್ಯತೆಯಿಂದ ಕೂಡಿದೆ. ದೇಸಾಯಿ ಮನೆತನದವರು ಕೇವಲ ಅರ್ಧ ದಿನ ಮಾತ್ರ ಗಣಪತಿಯನ್ನು ಕೂರಿಸುತ್ತಾರೆ. ಹಬ್ಬದ ದಿನ ಬೆಳಿಗ್ಗೆ ಪ್ರತಿಷ್ಠಾಪನೆಗೊಳ್ಳುವ ಗಣಪ ಮಧ್ಯಾಹ್ನದ ವೇಳೆಗೆ ನಿಮಜ್ಜನಗೊಳ್ತಾನೆ. ಈ ಸಂಪ್ರದಾಯಕ್ಕೆ ಐತಿಹಾಸಿಕ ಹಿನ್ನೆಲೆ ಇದೆ.
ಹುಬ್ಬಳ್ಳಿಗೆ ಆಗಮಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪ್ರೇರೇಪಣೆಯಿಂದ ಸಾರ್ವಜನಿಕವಾಗಿ ಗಣಪತಿ ಕೂರಿಸಿದ್ರೆ ಜನರು ಹೇಗೆ ಬ್ರಿಟಿಷರ ವಿರುದ್ಧ ಒಂದಾಗಬಹುದೆಂದು ವಿವರಿಸುತ್ತಾರೆ. ಇದರಿಂದ ಪ್ರೇರಿತರಾದ ದೇಸಾಯಿಯವರು ಸಾರ್ವಜನಿಕವಾಗಿ ತಮ್ಮ ವಾಡೆಯಲ್ಲಿ ವಿಜೃಂಭಣೆಯಿಂದ ಐದು ದಿನಗಳ ಕಾರ್ಯಕ್ರಮ ನಡೆಸಿದ್ದರು. ಬರಗಾಲದ ವರ್ಷ ಗಣೇಶೋತ್ಸವದ ಸಂಭ್ರಮದ ತಯಾರಿ ನಡೆಸಿ ಬೆಳಿಗ್ಗೆ ಚೌತಿ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದರು. ಗ್ರಾಮಸ್ಥರಿಗೆ ತೀರ್ಥ-ಪ್ರಸಾದ ವಿತರಿಸಲಾಗಿತ್ತು. ದೇಸಾಯಿವರು ಬ್ರಿಟಿಷ್ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೆಂದು ಪಿತೂರಿಯಿಂದ ವಾಡೆಗೆ ಬ್ರಿಟಿಷ್ ಸೈನ್ಯ ದಾಳಿ ಮಾಡಿತ್ತು. ಆಗ ಗಣೇಶೋತ್ಸವವು ಬ್ರಿಟಿಷ್ ವಿರೋಧಿಯಾಗಿತ್ತು. ಈ ದಾಳಿ ನಡೆದಿದ್ದು ಮಧ್ಯಾಹ್ನದ ಸಮಯ!
ದೇಸಾಯಿಯವರು ಗಣೇಶೋತ್ಸವದ ಪ್ರಸಾದ ವಿತರಿಸಿ ಊಟಕ್ಕೆ ಕೂರುವ ತಯಾರಿಯಲ್ಲಿದ್ದಾಗ ದಾಳಿಕೋರರು ಮನೆಬಾಗಿಲಿಗೆ ಬಂದಿದ್ದರು. ಬ್ರಿಟಿಷರೂ ಒಳಬಂದು ಗಣಪತಿಗೆ ಧಕ್ಕೆ ಮಾಡಬಹುದೆಂದು ಅಂದಾಜಿಸಿ ವಾಡೆಯಲ್ಲಿರುವ ಹುಡೇದ ಬಾವಿಯಲ್ಲಿ ಮೂರ್ತಿ ನಿಮಜ್ಜನೆ ಮಾಡಿ ಪಶ್ಚಿಮದ್ವಾರದ ಮುಖಾಂತರ ಭೂಗತರಾದರು. ಬ್ರಿಟಿಷರಿಗೆ ತಾವು ಬರುವ ಮುಂಚೆ ಏನು ನಡೆದಿದೆ? ಎಂಬ ಸುಳಿವು ಕೂಡಾ ದೊರಕಲಿಲ್ಲ.
ಬ್ರಿಟಿಷ್ ಸೈನ್ಯ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತು. ಭೋಗೇನಾಗರಕೊಪ್ಪ ಕೋಟೆಯ ಮೇಲೆ ನಡೆದ ದಾಳಿಯ ಇತಿಹಾಸ ಮರೆಯದ ದೇಶಕುಲಕರ್ಣಿ(ದೇಸಾಯಿ) ಇಂದಿಗೂ ಅರ್ಧದಿನ ಗಣಪನನ್ನು ಕೂರಿಸುವ ಪರಿಪಾಠ ಮುಂದುವರೆಸಿಕೊಂಡು ಬಂದಿದ್ದಾರೆ.
ಬೆಳಿಗ್ಗೆ ಗಣಪತಿಯನ್ನು ಕೂರಿಸಿ ಪೂಜೆ, ಮಹಾ ನೈವೇದ್ಯ, ಮಹಾಮಂಗಳಾರತಿ ನಂತರ ಮಧ್ಯಾಹ್ನದ ಊಟಕ್ಕೂ ಮುನ್ನವೇ ನಿಮಜ್ಜನೆ ಮಾಡಲಾಗುತ್ತದೆ ಎಂದು ಮನೆತನದ ಹಿರಿಯರಾದ ಬಸವಂತರಾವ್, ದೇಶಕುಲಕರ್ಣಿ ಹಾಗೂ ರಾಮಚಂದ್ರ ದೇಶಕುಲಕರ್ಣಿ ಇತಿಹಾಸ ನೆನಪಿಸಿಕೊಳ್ಳುತ್ತಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬವೊಂದು ಪರಂಪರಾಗತವಾಗಿ ಬಂದ ಭಕ್ತಿಗೂ ಧಕ್ಕೆ ಆಗದಂತೆ, ಬ್ರಿಟಿಷರಿಗೂ ಮಣಿಯದಂತೆ ದೇಶಭಕ್ತಿಯನ್ನು ಇಂದಿಗೂ ಮೆರೆಯುತ್ತಿರುವುದು ವಿಶೇಷ.