ಹುಬ್ಬಳ್ಳಿ : ಸಮರ್ಪಕವಾಗಿ ಮಳೆಯಾಗದೇ ಅನ್ನದಾತ ಕಂಗಾಲಾಗಿದ್ದಾನೆ. ಇದರ ಜೊತೆಗೆ ವಿದ್ಯುತ್ ನಂಬಿ ಕೃಷಿ ಮಾಡುವ ರೈತನ ಜೊತೆಗೆ ಹೆಸ್ಕಾಂ ಇಲಾಖೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ನೀರಾವರಿಗೆ ಬೇಕಾದ ವಿದ್ಯುತ್ ಪೂರೈಸಲು ಮೀನಮೇಷ ಎಣಿಸುತ್ತಿದ್ದು, ರೈತ ಸಮುದಾಯಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಧಾರವಾಡ ಜಿಲ್ಲೆಯ ರೈತರ ಪಂಪ್‌ಸೆಟ್‌ಗಳಿಗೆ ಕಳೆದ ಕೆಲ ದಿನಗಳಿಂದ ನಿಗದಿತ ಸಮಯಕ್ಕೆ ವಿದ್ಯುತ್ ನೀಡದಿರುವುದು ರೈತರಿಗೆ ಅನಾನುಕೂಲವಾಗುತ್ತಿದೆ. ರೈತರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಒಣಗುತ್ತಿದೆ. ಆದರೆ, ಬೋರ್‌ವೆಲ್ ಇದ್ದ ರೈತರು ಬೆಳೆಗಳಿಗೆ ನೀರು ಹಾಯಿಸಿ ಅಲ್ಪಸ್ವಲ್ಪ ಬೆಳೆಯನ್ನು ಬೆಳೆಯಬೇಕು ಎನ್ನುವ ಆಸೆಗೆ ಹೆಸ್ಕಾಂ ತಣ್ಣೀರು ಎರಚಿದೆ. ಈ ಮೊದಲು ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 7 ತಾಸು ವಿದ್ಯುತ್ ನೀಡುತ್ತಿದ್ದ ಹೆಸ್ಕಾಂ, ಈಗ ಸಮರ್ಪಕ ವಿದ್ಯುತ್ ಉತ್ಪಾದನೆಯಿಲ್ಲ ಎಂಬ ನೆಪದಿಂದ 4 ರಿಂದ 5 ತಾಸುಗಳ ನೀಡುತ್ತಿದೆ. ಅದರಲ್ಲೂ ಹಗಲು-ರಾತ್ರಿ ಎಂಬ ಎರಡು ಸಲ ಕರೆಂಟ್ ನೀಡುತ್ತಿರುವುದು ರೈತರಿಗೆ ಕಷ್ಟವಾಗುತ್ತಿದೆ.
5 ತಾಸು ಕರೆಂಟ್ ನೀಡುತ್ತಿದೆ ಹೆಸ್ಕಾಂ : ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳನ್ನು ಎರಡು ಬ್ಯಾಚ್‌ಗಳಾಗಿ ವಿಂಗಡಿಸಿ ವಿದ್ಯುತ್ ನೀಡುತ್ತಿದ್ದಾರೆ. ಮೊದಲ ಬ್ಯಾಚ್‌ನಲ್ಲಿ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಮತ್ತು ರಾತ್ರಿ 11 ಗಂಟೆಯಿಂದ 1 ಗಂಟೆಯವರೆಗೆ ಕರೆಂಟ್ ನೀಡಲಾಗುತ್ತಿದೆ. ಎರಡನೇ ಬ್ಯಾಚ್‌ನಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ, ರಾತ್ರಿ 1 ಗಂಟೆಯಿಂದ 3 ಗಂಟೆಯವರೆಗೆ ಎಂದು ಹಗಲು 3 ತಾಸು, ರಾತ್ರಿ 2 ತಾಸು ಒಟ್ಟು 5 ತಾಸು ಕರೆಂಟ್ ನೀಡುತ್ತಿದೆ ಹೆಸ್ಕಾಂ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಆದರೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂಗೆ ಯಾಕೆ ಸಾಧ್ಯವಾಗಲಿಲ್ಲ? ಎಂಬ ಬಗ್ಗೆ ಹೆಸ್ಕಾಂ ಎಂಡಿ ಮಹಮ್ಮದ್ ರೋಷನ್ ಸ್ಪಷ್ಟನೆ ನೀಡಿದ್ದಾರೆ. ಹೆಸ್ಕಾಂನಲ್ಲಿ ವಿದ್ಯುತ್ ಇರಲಿ, ಬಿಡಲಿ ವಿದ್ಯುತ್ ಖರೀದಿ ಮಾಡಿ ಕೊಡುತ್ತೇವೆ. ಗ್ರಾಮೀಣ ಭಾಗದ ನಿರಂತರ ಜ್ಯೋತಿ, ಕೈಗಾರಿಕೆಗಳು, ಹಾಗೂ ನಗರ ಪ್ರದೇಶಗಳಲ್ಲಿ ಇದುವರೆಗೂ ಯಾವುದೇ ವಿದ್ಯುತ್ ಕೊರತೆಯಾಗಿಲ್ಲ. ಎಲ್ಲ ವಿಭಾಗಗಳಿಗೆ 3 ಸಾವಿರ ಮೆಗಾವ್ಯಾಟ್ ಬೇಡಿಕೆ ಇದೆ. ಆದರೆ 500 - 800 ಮೆಗಾವ್ಯಾಟ್ ಕೊರತೆ ಇತ್ತು. ಆದರೆ ಈಗ ಅದರ ಸಮಸ್ಯೆ ಇಲ್ಲ. ಸದ್ಯಕ್ಕೆ ಅದನ್ನು ಸರಿದೂಗಿಸಲಾಗಿದೆ ಎಂದರು.
ಪ್ರತಿದಿನ 10 ಮಿಲಿಯನ್ ಯುನಿಟ್ ಖರೀದಿ: ವಿದ್ಯುತ್ ಕೊರತೆ ಇರುವುದು ನಿಜ. ಅದರಲ್ಲೂ ವಿಂಡ್ ಪವರ್ನಲ್ಲಿ ಕೊರತೆ ಇದ್ದು, ರೈತರು ಬೆಳಗ್ಗೆ ವಿದ್ಯುತ್ ಪೂರೈಕೆ ಮಾಡಲು ಬೇಡಿಕೆ ಇಡುತ್ತಿದ್ದಾರೆ. ಆದರೆ ಸರಿಯಾಗಿ ಮಳೆಯಾಗಲಿಲ್ಲ. ವಿಂಡ್ ಪವರ್ನಿಂದ ನಿರೀಕ್ಷಿತ ಮಟ್ಟದ ವಿದ್ಯುತ್ ಸಿಗಲಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಹೀಗಾಗಿ ಹೆಸ್ಕಾಂ ವಿಭಾಗದಲ್ಲಿ ಪ್ರತಿದಿನ 10 ಮಿಲಿಯನ್ ಯುನಿಟ್ ಖರೀದಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈಗಾಗಲೇ ರೈತರಿಗೆ ಯಾವುದೇ ತೊಂದರೆಯಾಗದಂತೆ ಹೆಸ್ಕಾಂನಿಂದ ತ್ರಿಪೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ನಿತ್ಯ 7 ತಾಸು ವಿದ್ಯುತ್ ಕೊಡಲು ಆಗದಿದ್ದರೂ ಈಗ ಆರೂವರೆ ತಾಸು ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಈಗಾಗಲೇ ರೈತ ಮುಖಂಡರ ಜೊತೆ ಸಭೆ ಮಾಡಲಾಗಿದೆ. ರೈತರು ಕೂಡ ಹಿಂದೆ ಆದ ಸಮಸ್ಯೆ ಮುಂದೆ ಆಗದಂತೆ ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಯಾವುದೇ ಸಮಸ್ಯೆಯಾಗದಂತೆ ಹೆಸ್ಕಾಂನಿಂದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಧಾರವಾಡದಲ್ಲಿ ಅನಿಯಮಿತ ವಿದ್ಯುತ್ ಕಡಿತ; ರೈತರಿಂದ ಗ್ರಿಡ್ ಮುತ್ತಿಗೆ ಯತ್ನ