ಹುಬ್ಬಳ್ಳಿ : ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಹಲವು ಇಲಾಖೆಗಳು 546 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಹೊರೆ ಸರಿದೂಗಿಸಿಕೊಳ್ಳಲು ಕೋವಿಡ್ ಸ್ಥಿತಿಯಲ್ಲಿಯೂ ವಿದ್ಯುತ್ ದರ ಏರಿಕೆಗೆ ಹೆಸ್ಕಾಂ ಮುಂದಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದೆ. ಸರ್ಕಾರಿ ಇಲಾಖೆಗಳ ಬಾಕಿ ಪಾವತಿ, ವಿದ್ಯುತ್ ಸರಬರಾಜಿನಲ್ಲಿನ ನಷ್ಟ ಮುಂತಾದವುಗಳ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ.
ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್‌ಗಳಿಗೆ ಬಾಕಿ ಹಣ ಪಾವತಿಗೆ ಸೂಚಿಸಿ ನೋಟಿಸ್ ನೀಡಲಾಗುತ್ತಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ 42 ಕೋಟಿ, ಬೆಳಗಾವಿ ಮಹಾನಗರ ಪಾಲಿಕೆ 53 ಕೋಟಿ ಬಾಕಿ ಉಳಿಸಿಕೊಂಡಿರುವುದು ಹೆಸ್ಕಾಂಗೆ ನುಂಗಲಾರದ ತುತ್ತಾಗಿದೆ.
ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗೆ ಬಳಸುವ ವಿದ್ಯುತ್ ಬಿಲ್ ಬಾಕಿ ಪ್ರತಿ ವರ್ಷ ಹೆಚ್ಚುತ್ತಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳು 129 ಕೋಟಿ ಹಾಗೂ ಗ್ರಾಮ ಪಂಚಾಯತ್‌ಗಳು 300 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ.
ಉಳಿದಂತೆ, ಸಣ್ಣ ನೀರಾವರಿ ಇಲಾಖೆ 17.02 ಕೋಟಿ, ಕರ್ನಾಟಕ ನೀರಾವರಿ ನಿಗಮ 32.66 ಕೋಟಿ, ಕೃಷ್ಣಾ ಭಾಗ್ಯ ಜಲನಿಗಮ 7 ಕೋಟಿ ಹಾಗೂ ಕೆಎನ್‌ಎನ್‌ಎಲ್ (ತುಂಗಾ ಮೇಲ್ದಂಡೆ ಯೋಜನೆ) 2.31 ಕೋಟಿ ವಿದ್ಯುತ್ ಬಿಲ್ ಪಾವತಿಸಬೇಕಿದೆ. ಕರ್ನಾಟಕ ನೀರಾವರಿ ನಿಗಮ ಸೇರಿ ಹಲವು ಇಲಾಖೆಗಳಿಗೆ ನೋಟಿಸ್ ಜಾರಿಯಾಗಿದೆ.
ಏಳು ದಿನಗಳಲ್ಲಿ ಬಾಕಿ ಪಾವತಿಸದಿದ್ದರೆ, ವಿದ್ಯುತ್ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸರ್ಕಾರದ ಅಂಗ ಸಂಸ್ಥೆಗಳೇ ಈ ರೀತಿ ಬಾಕಿ ಉಳಿಸಿಕೊಂಡರೆ ಹೇಗೆ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಲ್ಲದೇ, ಇವರು ಮಾಡುವ ಬಾಕಿಯಿಂದ ಇದರ ಹೊರೆಯನ್ನು ಸಾರ್ವಜನಿಕರು ಹೊರಬೇಕಾಗಿರುವುದು ವಿಪರ್ಯಾಸಕರ ಸಂಗತಿಯಾಗಿದೆ.
ಓದಿ: ಬೆಳಗಾವಿ : ರಮೇಶ್ ಜಾರಕಿಹೊಳಿ ಪುತ್ರನ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ ಆರೋಪ