ಧಾರವಾಡ: ಕಳೆದ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಅವಳಿ ನಗರಗಳು ತತ್ತರಗೊಂಡಿವೆ. ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ತುಪ್ಪರಿಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿದ್ದು, ಹಳ್ಳದ ಸಮೀಪ ಶೆಡ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೋರ್ವ ಪ್ರವಾಹಕ್ಕೆ ಸಿಲುಕಿದ್ದಾರೆ.
ತುಪ್ಪರಿ ಹಳ್ಳದ ರುದ್ರನರ್ತನಕ್ಕೆ ಈಗ ವ್ಯಕ್ತಿ ಸಿಲುಕಿದ್ದು, ವ್ಯಕ್ತಿಯು ಅಳಗವಾಡಿ ಗ್ರಾಮದ ನಿವಾಸಿ ಸೋಮಪ್ಪ ರಂಗಣ್ಣನವರ ಎಂದು ತಿಳಿದುಬಂದಿದೆ. ಇನ್ನು, ಪ್ರವಾಹದ ನೀರು ಹೆಚ್ಚುತ್ತಿದ್ದು, ಶೆಡ್ನ ಪಕ್ಕದಲ್ಲೇ ಇರುವ ಹಳೆಯ ಬಾವಿಯೊಂದರ ಮೇಲೆ ಸೋಮಪ್ಪ ಏರಿ ಕೂತಿದ್ದಾರೆ.
ವಿಷಯ ತಿಳಿಯುತ್ತಲೇ ಗ್ರಾಮಸ್ಥರು ನವಲಗುಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಹಶೀಲ್ದಾರ್ ಅನೀಲ ಬಡಿಗೇರ, ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದ ಹುಬ್ಬಳ್ಳಿ ತಾಲೂಕಿನ ಹೆಬಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ ಪರಿಣಾಮ ಶಾಲೆಯ ಕಂಬಗಳು ನೆಲಕ್ಕುರಳಿದ್ದು, ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ನವಲಗುಂದ ತಾಲೂಕ ಹೆಬ್ಬಾಳ ಹತ್ತಿರ ಗದ್ದನಿ ಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹ ಉಂಟಾಗಿದ್ದು, ಸಾಕಷ್ಟು ಬೆಳೆ ಹಾನಿಯಾಗಿದೆ.
ಹುಬ್ಬಳ್ಳಿಯಲ್ಲಿ ವರುಣನ ಅವಾಂತರಕ್ಕೆ ಕಾರ್ಗಳು ಕೂಡ ನೀರಿನಲ್ಲಿ ಮುಳುಗಿವೆ. ದಾಜಿಬಾನ್ ಪೇಟೆಯಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ ಪಾರ್ಕಿಂಗ್ ಜಾಗದಲ್ಲಿ ಐದಕ್ಕೂ ಹೆಚ್ಚು ಕಾರ್, ದ್ವಿಚಕ್ರವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಪಾರ್ಕಿಂಗ್ ಜಾಗದಲ್ಲಿ ಸುಮಾರು ಮೂರು ಅಡಿಯಷ್ಟು ನೀರು ನಿಂತಿದ್ದು, ಕಾರ್ ಹೊರ ತೆಗೆಯಲು ಹರಸಾಹಸಪಡುವಂತಾಗಿದೆ. ರಾಜಕಾಲುವೆ ದುರಸ್ತಿ ಮಾಡದೆ ಇರೋದೆ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ರಾತ್ರಿ ಮಳೆಯಿಂದ ನಗರದ ರಸ್ತೆಗಳ ಮೇಲೆ ಚರಂಡಿ ತ್ಯಾಜ್ಯ ಹರಡಿ ಸಾರ್ವಜನಿಕರು ಓಡಾಡಲು ಕಷ್ಟವಾಗಿತ್ತು. ಹೀಗಾಗಿ ಪಾಲಿಕೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ದಾಜಿಬಾನ್ ಪೇಟೆ, ಕಮರಿಪೇಟೆ ಸೇರಿದಂತೆ ನಗರದ ಪ್ರಮಖ ರಸ್ತೆಗಳ ಮೇಲೆ ಚರಂಡಿ ತ್ಯಾಜ್ಯವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಓದಿ: ಹುಬ್ಬಳ್ಳಿಯಲ್ಲಿ ವರುಣನ ಅರ್ಭಟ.. ಮಳೆ ನೀರಿನಲ್ಲಿ ಕೊಚ್ಚಿ ಹೋದ ಬೈಕ್ಗಳು